ಬೆಂಗಳೂರು : ರಾಜ್ಯದಲ್ಲಿ ಲಾಕ್ ಡೌನ್ 3ನೇ ಹಂತ ಯಶಸ್ವಿಗೊಳಿಸುವ ಜವಾಬ್ದಾರಿ ಸಾರ್ವಜನಿಕರದ್ದು. ಒಂದು ವೇಳೆ ಇದು ಯಶಸ್ವಿ ಆಗದೇ ಇದ್ದರೆ ಮುಂದೆ ಕಠಿಣ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೃಷಿ ಮತ್ತು ಆರ್ಥಿಕ ಚಟುವಟಿಕೆಗಳಿಗಾಗಿ ಲಾಕ್ ಡೌನ್ ನಲ್ಲಿ ಕೆಲವು ಸಡಿಲಿಕೆ ಮಾಡಲಾಗಿದೆ. ಇದರ ಅರ್ಥ ಕೊರೊನಾ ವೈರಸ್ ಸಂಪೂರ್ಣ ತೊಲಗಿದೆ ಎಂದಲ್ಲ. ಕೊರೊನಾ ಇನ್ನೂ ಇದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು ಎಂದರು.
ಜನರು ಅಂತರ ಪಾಲನೆ, ಮಾಸ್ಕ್ ಧರಿಸುವುದು ಸೇರಿ ಇತರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಹಕರಿಸಬೇಕು. ಇಲ್ಲವಾದರೆ, ಪರಿಸ್ಥಿತಿ ಗಂಭೀರವಾಗಲಿದೆ. ಆಗ ಇನ್ನಷ್ಟು ಕಠಿಣ ನಿಯಮ ಜಾರಿ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ಇನ್ನು ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ತೆರಳುವುದಕ್ಕೆ ಯಾರೂ ಅಡ್ಡಿ ಮಾಡಿಲ್ಲ. ರೈಲು ನಿಲ್ಲಿಸಲಿಲ್ಲ. ಈ ಸಂಬಂಧ ಕಾಂಗ್ರೆಸ್ ನವರು ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಬೊಮ್ಮಾಯಿ, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ನಿಲ್ಲಿಸಬೇಕು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.