ಕೊರೊನಾ ವೈರಸ್ ಸೋಂಕು ಮತ್ತಷ್ಟು ಜನರಿಗೆ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಾಂತ ಎಲ್ಲಾ ಥಿಯೇಟರ್, ಮಾಲ್, ಬಾರ್, ಪಬ್ ಒಂದು ವಾರಗಳ ಕಾಲ ಬಂದ್ ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಆರೋಗ್ಯ ಸಚಿವರು, ವೈದ್ಯರು ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆಗೆ ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಂಡಿದ್ದಾರೆ.
ಥಿಯೇಟರ್, ಮಾಲ್, ಬಾರ್, ಪಬ್, ನೈಟ್ ಕ್ಲಬ್ ಅಷ್ಟೇ ಅಲ್ಲದೆ, ನಿಶ್ಚಿತಾರ್ಥ, ನಾಮಕರಣ, ಸಭೆ ಸಮಾರಂಭ, ಜಾತ್ರೆ ಮುಂತಾದ ಕಾರ್ಯಕ್ರಮಗಳನ್ನು ಒಂದು ವಾರಗಳ ಮಟ್ಟಿಗೆ ನಡೆಸದಂತೆ ಆದೇಶಿಸಲಾಗಿದೆ. ಮುಂದಿನ 15 ದಿನಗಳವರೆಗೆ ವಿದೇಶ ಪ್ರವಾಸಕ್ಕೆ ತೆರಳದಂತೆ ಸೂಚನೆ ನೀಡಲಾಗಿದ್ದು, ರಾಜ್ಯದ ವಿಶ್ವ ವಿದ್ಯಾಲಯಗಳಿಗೆ 1 ವಾರ ರಜೆ ಘೋಷಿಸಲಾಗಿದೆ. ಸರಳ ರೀತಿಯ ಮದುವೆಗೆ ಅನುಮತಿ ದೊರಕಿದ್ದು 100ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ಆದೇಶಿಸಲಾಗಿದೆ. ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಗಳು ಎಂದಿನಂತೆ ನಡೆಯಲಿದ್ದು, ಐಟಿ ಯವರಿಗೆ ವರ್ಕ್ ಫ್ರಂ ಹೋಮ್ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ. ಅಧಿವೇಶನಗಳು ಎಂದಿನಂತೆ ನಡೆಯಲಿದ್ದು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಈ ನಿರ್ಧಾರ ಇಡೀ ರಾಜ್ಯಕ್ಕೆ ಅನ್ವಯವಾಗಲಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಈ ತೀರ್ಮಾನವನ್ನು ಕೈಗೊಂಡಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.