ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಗೆ ತಗುಲಿರುವ ಕೊರೊನಾ ಸೋಂಕು ಸಂಸದ ದುಶ್ಯಂತ್ ಸಿಂಗ್ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನೂ ಕಾಡಿದೆ. ರಾಷ್ಟ್ರಪತಿಗಳ ಎಲ್ಲ ದೈನಂದಿನ ನಿಗದಿತ ಕಾರ್ಯಕ್ರಮಗಳನ್ನು ಮುಂದೂಡಲಾಗಿದ್ದು, ಅವರು ಕೋವಿಡ್-19 ಪರೀಕ್ಷೆಗೆ ಒಳಗಾಗುತ್ತಾರೆ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ ಎನ್ನಲಾಗಿದೆ.
ಕೊರೋನಾ ಸೋಂಕು ದೃಢಪಟ್ಟಿರುವ ಬಾಲಿವುಡ್ ಗಾಯಕಿ ಆಯೋಜಿಸಿದ್ದ ಪಾರ್ಟಿಯಲ್ಲಿ ಬಿಜೆಪಿ ಸಂಸದ ದುಶ್ಯಂತ್ ಸಿಂಗ್ ಭಾಗಿಯಾಗಿದ್ದರು. ನಂತರ ದುಶ್ಯಂತ್ ಸಿಂಗ್ ಸಂಸತ್ ಗೂ ತೆರಳಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು ಮತ್ತು ರಾಷ್ಟ್ರಪತಿ ಭವನದಲ್ಲಿ ಉತ್ತರ ಪ್ರದೇಶ ಹಾಗು ರಾಜಸ್ಥಾನ ಸಂಸದರಿಗೆ ಆಯೋಜಿಸಿದ್ದ ಉಪಹಾರ ಕೂಟದಲ್ಲಿ ಕೂಡ ಭಾಗವಹಿಸಿದ್ದರು. ಉಪಹಾರ ಕೂಟದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡ ಭಾಗವಹಿಸಿದ್ದು, ರಾಷ್ಟ್ರಪತಿಗಳಿಗೆ ಕೊರೊನಾ ಆತಂಕ ಕಾಡಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್-19 ಪರೀಕ್ಷೆಗೆ ಒಳಪಡಲಿದ್ದಾರೆ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ. ಅಲ್ಲದೆ ಸಂಸತ್ತು ಹಾಗೂ ರಾಷ್ಟ್ರಪತಿ ಆಯೋಜಿಸಿದ್ದ ಉಪಹಾರ ಕೂಟದಲ್ಲಿ ದುಶ್ಯಂತ್ ರೊಂದಿಗೆ ಸಂಪರ್ಕ ಹೊಂದಿದ ಸಂಸದರೆಲ್ಲರೂ ಭೀತಿಗೊಳಗಾಗಿದ್ದಾರೆ.
ಮಾರ್ಚ್ 18ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಉಪಹಾರ ಕೂಟದಲ್ಲಿ ಭಾಗವಹಿಸಿದ್ದ ದುಶ್ಯಂತ್ ಸಿಂಗ್, ಶುಕ್ರವಾರ ಸ್ವಯಂ ನಿರ್ಬಂಧ ವಿಧಿಸಿಕೊಂಡು ಮನೆಯಲ್ಲೇ ನಿಗಾದಲ್ಲಿ ಇರುವುದಾಗಿ ಘೋಷಿಸಿದ್ದಾರೆ. ಸಂಸದ ದುಶ್ಯಂತ್ ಸಿಂಗ್ ಜೊತೆ ಅವರ ತಾಯಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಕೂಡ ಕನಿಕಾ ಕಪೂರ್ ಜೊತೆ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದು, ಅವರನ್ನು ಕೂಡ ಹೋಮ್ ಐಸೊಲೇಷನ್ ನಲ್ಲಿ ಇಡಲಾಗಿದೆ.
ದುಷ್ಯಂತ್ ಸಿಂಗ್ ಸ್ವಯಂ ನಿರ್ಬಂಧ ವಿಧಿಸಿ ಕೊಂಡಿರುವುದು ಗೊತ್ತಾದ ತಕ್ಷಣ ಟಿಎಂಸಿಯ ಡೆರೆಕ್ ಒಬ್ರೆಯನ್, ಅಪ್ನಾ ದಳದ ಅನು ಪ್ರಿಯಾ ಪಟೇಲ್ ಸೇರಿ ಹಲವರು ಮನೆಯಲ್ಲೇ ಉಳಿದು ಸ್ವಯಂ ನಿರ್ಬಂಧ ವಿಧಿಸಿ ಕೊಂಡಿದ್ದಾರೆ. ಕನಿಕಾ ಕಪೂರ್ ಪಾರ್ಟಿಯಲ್ಲಿ ಉತ್ತರ ಪ್ರದೇಶದ ಆರೋಗ್ಯ ಸಚಿವ ಜೈ ಸಿಂಗ್, ಬಿಜೆಪಿಯ ವರುಣ್ ಗಾಂಧಿ, ಬಿಜೆಪಿ ನಾಯಕ ಸುಖೇಂದು ಶೇಖರ್ ರಾಯ್ ಸೇರಿದಂತೆ ಅನೇಕರು ಇದ್ದರು ಎಂಬುದು ತಿಳಿದು ಬಂದಿದ್ದು, ಅವರೆಲ್ಲಾ ತಮ್ಮ ಮನೆಗಳಲ್ಲೇ ನಿಗಾದಲ್ಲಿ ಇರಲು ನಿರ್ಧರಿಸಿದ್ದಾರೆ. ಟಿಎಂಸಿಯ ಡೆರೆಕ್ ಒಬ್ರೆಯನ್ ‘ಕೇಂದ್ರ ಸರ್ಕಾರ ನಮ್ಮೆಲ್ಲರನ್ನೂ ರಿಸ್ಕ್ ಗೆ ಗುರಿಯಾಗಿಸಿದೆ. ಎಲ್ಲರೂ ಮನೆಗಳಲ್ಲಿ ಇರಿ ಎಂದು ಪ್ರಧಾನಿ ಮೋದಿ ಹೇಳಿದ್ದರೂ, ಸಂಸತ್ ಅಧಿವೇಶನ ಮಾತ್ರ ಮುಂದುವರಿದಿದೆ’ ಎಂದು ಕಿಡಿಕಾರಿದ್ದಾರೆ.
ಮಾರ್ಚ್ 18 ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಉಪಹಾರ ಕೂಟದಲ್ಲಿ 20 ಸಂಸದರು ಪಾಲ್ಗೊಂಡಿದ್ದು, ಎಲ್ಲ ಸಂಸದರನ್ನು ಥರ್ಮಲ್ ಚೆಕ್ ಅಪ್ ಮಾಡಿಯೇ ರಾಷ್ಟ್ರಪತಿ ಭವನದ ಒಳಗಡೆ ಬಿಡಲಾಗಿದೆ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.
ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಕೂಡ ಶುಕ್ರವಾರ ಆಮೆರಿಕಾದಿಂದ ಭಾರತಕ್ಕೆ ಮರಳಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮನೆಯಲ್ಲಿ ಇರುವುದಾಗಿ ತಿಳಿಸಿದ್ದಾರೆ