ಚಕ್ರಗಳು ತಿರುಗತ್ತಲೇ ಇರುತ್ತವೆ ಎಡಬಿಡದೆ
ಬಿಡುವಿಲ್ಲದೆ ಸುತ್ತುತ್ತವೆ
ಗಡಗಡೆಯಂತಹ ತಿರುಪಣಿಯಂತಹ
ಬಂಡಿಯ ಚಕ್ರಗಳು
ಅಲ್ಲಲ್ಲಿ ಅದಾಗೇ ನಿಲ್ಲುತ್ತವೆ
ಕೆಲವೆಡೆ ಬ್ರೇಕೊತ್ತಿ ಬಲವಂತದಿಂದ ನಿಲ್ಲಿಸಬೇಕು
ಮತ್ತೆ ಚಲಾಯಿಸಿ ಮುಂದೆ ಕೊಂಡೊಯ್ಯುತ್ತಿರಬೇಕು
ಬದುಕೊಂದು ಅನವರತ ಸಂಚರಿಸುವ ರೈಲುಬಂಡಿಯ ಚಕ್ರಗಳಂತೆ
ಸದಾ ಚಲನಾಶೀಲ
ಸದ್ದು ಮಾಡಿ ಓಡುತ್ತದೆ ನಿರಂತರ
ಇದರ ಚಕ್ರಗಳಿಗೂ ಪುರುಸೊತ್ತಿಲ್ಲದ ದುಡಿಮೆ
ಎಂಜಿನ್ನಿನ ಇಗ್ನೇಷನ್ ತಿರುವುತ್ತಿದ್ದಂತೆ ಓಡಲು ರೆಡಿಯಾಗಬೇಕು
ಆನ್ ಯುವರ್ ಮಾರ್ಕ್, ರೆಡಿ ಒನ್ ಟು ತ್ರಿ
ಓಡೆಂದರೆ ಓಡಬೇಕು; ನಿಲ್ಲೆಂದರೆ ನಿಲ್ಲಬೇಕು
ಯಾರದ್ದೋ ನಿರ್ದೇಶನ ಪಾಲಿಸಬೇಕಾದ ದರ್ದು
ಆಗಾಗ ಯಾರೊ ಬಂದು ನಟ್ಟುಗಳ ಟೈಟ್ ಮಾಡುತ್ತಾರೆ
ಮತ್ತಾರೋ ಬಂದು ಸಂದುಗಳಿಗೆ ಕೀಲೆಣ್ಣೆ ಸವರುತ್ತಾರೆ
ಚಕ್ರಗಳು ನಿರ್ಲಿಪ್ತವಾಗಿ ನಿಂತಿರುತ್ತವೆ
ಅವುಗಳದ್ದು ಎಂದಿಗೂ ಬದಲಾಗದ ಏಕಪ್ರಕಾರದ ಭಾವರಾಹಿತ್ಯ ಗತಿ
ಮುಂದಿನ ನಿಲ್ದಾಣವೂ ಗೋಚರವಾಗದ ಸ್ಥಿತಿ
ಭಗವಂತನ ಉತ್ಸವ ಮೂರ್ತಿ ವಿರಾಜಮಾನವಾದ ಭವ್ಯ ಬ್ರಹ್ಮರಥವೂ
ಸನ್ನೆ ಕೊಟ್ಟರಷ್ಟೆ ನಿಲ್ಲುತ್ತದೆ
ಅಂತದರಲ್ಲಿ ಈ ನಿರುಪದ್ರವಿ ರೈಲಿನ ಗಾಡಿಯ ನೂರಾರು ಚಕ್ರಗಳಿಗೆ ಸ್ವಂತಿಕೆ ಎಲ್ಲಿ?
ಎಂಜಿನ್ನಿಗಾದರೂ ಮತ್ತೆ ನಡೆಸುವ ಚಾಲಕ ಶಕ್ತಿಯೆಂಬ
ಆತ್ಮಸಂಕಲ್ಪ ಮನೋಬಲಗಳ ವಿಸ್ಮಯಕಾರಿ ವರವುಂಟು
ಪಾಪ ಚಕ್ರಗಳಿಗೆ ಆತ್ಮಬಲವೂ ಇಲ್ಲ ದೃಢ ಸಂಕಲ್ಪಗಳೂ ಇಲ್ಲ
ಇವು ಪರಾವಲಂಭಿ ಯಾಂತ್ರಿಕ ಸ್ವತ್ತುಗಳು
ಯಾರದ್ದೋ ಒಡೆತನ ಯಾರದ್ದೋ ಅಪ್ಪಣೆಗೆ ಕಾಯುವ ಕರ್ಮ
ಯುದ್ಧವಿರಲಿ, ಕ್ಷಾಮವಿರಲಿ, ಸೋಂಕಿರಲಿ, ಜಾತ್ರೆಯಿರಲಿ
ಸಂಭ್ರಮವಿರಲಿ ಸೂತಕವಿರಲಿ
ಅಳುವವರಿರಲಿ ಖುಷಿಯವರಿರಲಿ
ಈ ಚಕ್ರಗಳು ಮಾತ್ರ ಎಲ್ಲವನ್ನೂ ಗಮನಿಸದೆ
ತಮ್ಮ ಪಾಡಿಗೆ ತಾವು ಉರುಳತ್ತಲೇ ಇರುತ್ತವೆ
ನಟ್ಟ ನಡುವಿನ ದಟ್ಟ ಅಡವಿಯಲ್ಲೂ ಯಾರೋ ಚೈನೆಳೆದು ನಿಲ್ಲಿಸುತ್ತಾರೆ
ಒತ್ತಾಯಪೂರ್ವಕ ನಿಲುಗಡೆ
ಯಾರದ್ದೋ ತುರ್ತು ನಿರ್ಗಮನ
ಇಳಿದ ಯಾತ್ರಿಕನಿಗೊಂದು
ಬೇಸರದ ವಿದಾಯವನ್ನೂ ಹೇಳದ ಚಕ್ರಗಳು ಮತ್ತೆ ನಾಗಾಲೋಟಕ್ಕೆ ಸಿದ್ಧವಾಗುತ್ತವೆ
ಕಾಣದ ಒಡೆಯನ ಅಪ್ಪಣೆಗೆ ಕಾಯುತ್ತವೆ
-ವಿಭಾ