ನವದೆಹಲಿ: ಮಹಾರಾಷ್ಟ್ರ, ತಮಿಳುನಾಡು, ದೆಹಲಿಯಲ್ಲಿ ಮಹಾಮಾರಿ ಕೊರೊನಾ ಸೋಂಕಿತ ಪ್ರಕರಣಗಳ ದಿನೇ ದಿನೇ ಸಾವಿರ ಗಡಿ ದಾಟುತ್ತಿದ್ದರೂ, ಸಕ್ರಿಯ ಪ್ರಕರಣಗಳಿಗೆ ಹೋಲಿಸಿದರೆ ಚೇತರಿಕೆಯ ಸಂಖ್ಯೆಯು ಹೆಚ್ಚುತ್ತಿರುವುದು ದೇಶವಾಸಿಗಳಲ್ಲಿ ಹೊಸ ಆಶಾಕಿರಣ ಮೂಡಿಸುತ್ತಿದೆ.
ಮಂಗಳವಾರ ಒಂದೇ ದಿನ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10 ಸಾವಿರ ಸಮೀಪಿಸಿತ್ತು. ಇದು ಜನರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿತ್ತು. ಮಹಾರಾಷ್ಟ್ರದಲ್ಲಿ ಈಗಾಗಲೇ ಕೊರೊನಾ ವೈರಸ್ ಸಮುದಾಯದ ಹಂತಕ್ಕೆ ಹರಡಿದ್ದು, ತಮಿಳುನಾಡು ಹಾಗೂ ದೆಹಲಿ ರಾಜ್ಯಗಳು ಇದೇ ಆತಂಕದಲ್ಲಿವೆ. ಇದರ ನಡುವೆಯೇ ದಿನನಿತ್ಯ ವರದಿಯಾಗುತ್ತಿರುವ ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಚಿಕಿತ್ಸೆ ಬಳಿಕ ಗುಣಮುಖರಾಗುತ್ತಿರುವವ ಸಂಖ್ಯೆ ಹೆಚ್ಚುತ್ತಿದೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ನೀಡಿರುವ ಅಂಕಿ ಅಂಶಗಳು ಇದನ್ನು ಪುಷ್ಠೀಕರಿಸಿವೆ.
2 ಸಾವಿರದಷ್ಟು ಹೆಚ್ಚಳಗೊಂಡಿವೆ ಚೇತರಿಕೆ ಪ್ರಕರಣಗಳು
ಹೌದು, ದೇಶದಲ್ಲಿ ಬುಧವಾರ ಕೊರೊನಾ ಸೋಂಕಿತರ ಸಂಖ್ಯೆ 2 ಲಕ್ಷ 76 ಸಾವಿರದ 583 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 1 ಲಕ್ಷದ 33 ಸಾವಿರದ 632 ಕೊರೊನಾ ಸಕ್ರಿಯ ಪ್ರಕರಣಗಳಾಗಿದ್ದರೆ, 1 ಲಕ್ಷದ 35 ಸಾವಿರದ 206 ಮಂದಿ ಚಿಕಿತ್ಸೆ ಬಳಿಕ ಗುಣಮುಖರಾಗಿ ಡಿಶ್ಚಾರ್ಜ್ ಆಗಿದ್ದಾರೆ. ಅಲ್ಲಿಗೆ ಈ ಅಂತರ 1574ರಷ್ಟಾಗುವ ಮೂಲಕ ಶೇ.48.99ರಷ್ಟಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾ ಸೋಂಕು ತಡೆಗೆ ದೇಶಾದ್ಯಂತ ಜಾರಿಗೆ ತಂದಿದ್ದ ಲಾಕ್ಡೌನ್ ಬಹುತೇಕ ಸಡಿಲಗೊಳಿಸಲಾಗಿದೆ. ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ. ಇದರ ನಡುವೆ ಅಂತಾರಾಜ್ಯ ಮಟ್ಟದಲ್ಲಿ ವಲಸೆ ಕಾರ್ಮಿಕರ ಸಂಚಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರ ಮತ್ತು ತಮಿಳುನಾಡಿನಿಂದ ಬರುತ್ತಿರುವ ವಲಸೆ ಕಾರ್ಮಿಕರಿಂದ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ನಿದ್ದೆಗೆಡಿಸಿದೆ.
ಹೆಚ್ಚಿದ ಕೊರೊನಾ ಆಶಾವಾದ
ದೇಶದಲ್ಲಿ ಮುಂದಿನ ಕೆಲವೇ ತಿಂಗಳಲ್ಲಿ ಕೊರೊನಾ ವೈರಸ್ ಸಮುದಾಯದ ಹಂತದಲ್ಲಿ ಹರಡುವ ಭೀತಿಯ ನಡುವೆಯೇ ಡಿಶ್ಚಾರ್ಜ್ ಆಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಭಾರತೀಯರಲ್ಲಿ ಆಶಾವಾದ ಹುಟ್ಟಿಸಿದೆ. ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ ಬಳುತ್ತಿರುವವರ ಪೈಕಿ ಡಿಶ್ಚಾರ್ಜ್ ಆಗುವವರ ಪ್ರಮಾಣ ಕಡಿಮೆ ಇದೆ. ಆದರೆ, ಭಾರತದಲ್ಲಿ ಈ ಪ್ರಮಾಣ ಮೊದಲಿನಿಂದಲೂ ಜಾಸ್ತಿಯೇ ಇತ್ತು. ಚೀನಾ, ಅಮೆರಿಕ, ಇಂಗ್ಲೆಂಡ್, ಸ್ಪೇನ್ ರಾಷ್ಟ್ರಗಳಿಗೆ ಹೋಲಿಸಿದರೆ ಕೊರೊನಾ ವಿಚಾರದಲ್ಲಿ ಭಾರತೀಯರಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಎಂದು ವೈದ್ಯರು ಆಗಾಗ ಹೇಳುತ್ತಲೇ ಬಂದಿದ್ದಾರೆ. ಈ ಮಾತಿಗೆ ಕೊರೊನಾ ಸಕ್ರಿಯ ಪ್ರಕರಣಗಳ ಪೈಕಿ ಚಿಕಿತ್ಸೆ ಪಡೆದು ಆದಷ್ಟು ಬೇಗ ಗುಣಮುರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಪುಷ್ಠಿ ನೀಡಿದೆ.
ಮೊದಲ ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿದ್ದರೂ, ಕೆಲವೇ ದಿನಗಳಲ್ಲಿ ನೆಗೆಟಿವ್ ಎಂದು ಬಹಳಷ್ಟು ಮಂದಿ ಆಸ್ಪತ್ರೆಗಳಿಂದ ಡಿಶ್ಚಾರ್ಜ್ ಆಗುತ್ತಿದ್ದಾರೆ. ಕೊರೋನಾ ಸೋಂಕು ದೇಹವನ್ನು ಪ್ರಭಲವಾಗಿ ಅತಿಕ್ರಮಸುವ ಮೊದಲೇ ಚಿಕಿತ್ಸೆ ಸಿಗುತ್ತಿರುವುದು ಮಹಾಮಾರಿ ವಿರುದ್ಧದ ಹೋರಾಟಕ್ಕೆ ಕೆಲವೇ ದಿನಗಳಲ್ಲಿ ಜಯ ಸಿಗಲಿದೆ ಎಂಬ ನೆಮ್ಮದಿಯ ಗೆರೆ ಮೂಡಿರುವುದು ಹುಟ್ಟುಹಾಕಿರುವುದು ಗಮನಾರ್ಹವಾಗಿದೆ..








