ಮಂಗಳೂರು ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾಗಿ ಆತಂಕ ಸೃಷ್ಟಿಸಿದ್ದ ಕೊರೋನಾ ಶಂಕಿತ ಕೊನೆಗೂ ಪತ್ತೆಯಾಗಿದ್ದಾನೆ.ಇಂದು ಬೆಳಗಿನ ಜಾವ ನಗರದ ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೊರೋನಾ ಶಂಕಿತ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ರಂಗರಮಜಲು ಗ್ರಾಮದ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾನೆ.
ದುಬೈನಿಂದ ಭಾನುವಾರ ತಡರಾತ್ರಿ ಮಂಗಳೂರಿನ ಏರ್ ಪೋರ್ಟಿಗೆ ಆಗಮಿಸಿದ ಈ ವ್ಯಕ್ತಿಗೆ ಜ್ವರ ಕಂಡು ಬಂದ ಹಿನ್ನೆಲೆಯಲ್ಲಿ ಕೂಡಲೇ ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಐಸೋಲೇಶನ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಇಂದು ಮುಂಜಾನೆ ಆತ ಐಸೋಲೇಶನ್ ವಾರ್ಡ್ ನಿಂದ ಪರಾರಿಯಾಗಿದ್ದ.
ಮಂಗಳೂರು ಉಳ್ಳಾಲ ನಿವಾಸಿಯಾಗಿದ್ದ ಆತನ ಮನೆಗೆ ಆರೋಗ್ಯಾಧಿಕಾರಿಗಳು ತೆರಳಿದ್ದು ಆತನ ಮನೆಯವರು ಮತ್ತು ಸ್ಥಳೀಯರು ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಸೋಮವಾರ ಬೆಳಗ್ಗಿನ ಜಾವ ಮಂಗಳೂರು ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾದ ಈತ ಮಧ್ಯಾಹ್ನದ ಸಮಯ ಬಂಟ್ವಾಳ ತಾಲೂಕು ವಿಟ್ಲದ ಪಳಿಕೆ ರಂಗರಮಜಲು ಎಂಬಲ್ಲಿರುವ ತನ್ನ ಪತ್ನಿಯ ಮನೆಗೆ ಆಗಮಿಸಿದ್ದ. ಇದರಿಂದ ಆತಂಕಿತರಾದ ಸ್ಥಳೀಯರು ಕೂಡಲೇ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ವಿಟ್ಲ ಪೊಲೀಸ್ ಉಪನಿರೀಕ್ಷಕ ವಿನೋದ್ ಎಸ್. ಕೆ. ತೆರಳಿ ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ ಕೊಟ್ಟಿದ್ದು, ಸ್ಥಳದಲ್ಲಿ ಸಿಬ್ಬಂದಿ ಹೇಮಾ ಅವರನ್ನು ನಿಯೋಜಿಸಿದ್ದರು. ಬಂಟ್ವಾಳ ದಂಡಾಧಿಕಾರಿಗಳಾದ ರಶ್ಮಿ ಎಸ್. ಆರ್., ತಾಲೂಕು ವೈದ್ಯಾಧಿಕಾರಿ ದೀಪಾ ಪ್ರಭು ಭೇಟಿ ನೀಡಿ ಆತನ ಮನವೊಲಿಸಿ ಮತ್ತೆ ಆಸ್ಪತ್ರೆಗೆ ದಾಖಲಿಸಿದ್ದು, ಆತನ ಪರೀಕ್ಷೆಯ ವರದಿಗಳು ಬರುವವರೆಗೂ ಆಸ್ಪತ್ರೆಯಲ್ಲಿ ಇರುವಂತೆ ವಿನಂತಿಸಿಕೊಂಡಿದ್ದಾರೆ.








