ತಪ್ಪು ಗ್ರಹಿಕೆಯಿಂದ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು : ಸಿದ್ದರಾಮಯ್ಯ
ಮೈಸೂರು : ತಪ್ಪು ಗ್ರಹಿಕೆಯಿಂದ ಕೆಲವರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನ ಸುತ್ತೂರು ಮಠದಲ್ಲಿ ಹಿತಾಯು ಹಾಗೂ ಇಮ್ಯೂನೋ ಕಿಟ್ ಔಷಧಿ ಬಿಡುಗಡೆ ಮಾಡಿ ಮಾತನಾಡಿದ ಸಿದ್ದರಾಮಯ್ಯ, ತಪ್ಪು ಮಾಹಿತಿಯಿಂದ ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.
ವೈದ್ಯರು, ಸ್ವಾಮೀಜಿಗಳು ಸೇರಿದಂತೆ ಎಲ್ಲರೂ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆಯಿಂದ ಏನೂ ಸಮಸ್ಯೆ ಆಗಲ್ಲ. ವಿದ್ಯಾವಂತರಲ್ಲೂ ಅರಿವು ಮೂಡಿಲ್ಲ, ಇನ್ನು ಅವಿದ್ಯಾವಂತರ ಪಾಡೇನು? ಎಂದರು.
ಇನ್ನು ನಮ್ಮ ಅತ್ತಿಗೆ ಕೊರೊನಾದಿಂದ ಮರಣ ಹೊಂದಿದರು. ಕೊರೊನಾ ಯಾರನ್ನೂ ಬಿಡುತ್ತಿಲ್ಲ. ವಿದ್ಯಾವಂತರಿಗೂ, ಅವಿದ್ಯಾವಂತರಿಗೂ ಕೊರೊನಾ ಬರುತ್ತೆ.
ಈ ಕೊರೊನಾ ಮುಗಿಯುವವರೆಗೂ ಮಾಸ್ಕ್ ಹಾಕಿಕೊಳ್ಳಬೇಕು. ಕೆಲವರು ಬಾಯಿಗೆ ಮಾಸ್ಕ್ ಹಾಕಿಕೊಂಡು ಮೂಗಿನ ಮೇಲೆ ಸರಿಯಾಗಿ ಹಾಕುವುದಿಲ್ಲ. ಇದರ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರ ಎಲ್ಲರಿಗೂ ಲಸಿಕೆ ಕೊಡಬೇಕು. ಹಾಗೆಯೇ ಕೋವಿಡ್ ಪರೀಕ್ಷೆಯನ್ನೂ ಹೆಚ್ಚಿಸಬೇಕು ಎಂದು ಒತ್ತಾಯಿಸಿದ ಸಿದ್ದರಾಮಯ್ಯ, ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಲ್ಲ, ಲಸಿಕೆ ಬಗ್ಗೆಯೂ ಅರಿವು ಮೂಡಿಲ್ಲ.
ಸ್ವಲ್ಪ ಸೋಂಕು ಕಡಿಮೆಯಾಗುತ್ತಿದ್ದಂತೆ ಮತ್ತೆ ಜನ ಸೇರುತ್ತಾರೆ, ಮಾಸ್ಕ್ ಧರಿಸುವುದನ್ನು ಬಿಡುತ್ತಾರೆ. ಮುಂದಿನ ಅಲೆ ಶುರುವಾಗುತ್ತದೆ. ಈ ಬಗ್ಗೆ ಜನರು ಎಚ್ಚರ ವಹಿಸಬೇಕು ಎಂದು ಮನವಿ ಮಾಡಿಕೊಂಡರು.