ಜಗತ್ತೇ ಕೊರೊನಾ ವೈರಸ್ ಭಾದೆಗೆ ಒಳಗಾಗಿ ತೊಳಲಾಡುತ್ತಿರುವ ಈ ಸಂದರ್ಭದಲ್ಲಿ ವಿಶ್ವದ ಆಗುಹೋಗುಗಳನ್ನು ಗಮನಿಸಿದಾಗ ಹೆಣ್ಣಿನ ನಾಯಕತ್ವದ ರಾಷ್ಟ್ರದಲ್ಲಿ ಕೋವಿಡ್-19 ನ ಸೋಂಕಿನ ಸಾವು ನೋವು ಗಣನೀಯ ಪ್ರಮಾಣದಲ್ಲಿ ಕಡಿಮೆ ಇರುವುದು ಎದ್ದು ಕಾಣುತ್ತದೆ.
ತನ್ನ ಕುಟುಂಬದ ಒಳಿತಿಗಾಗಿ ಎಂತಹ ಕಠಿಣ ಸಂದರ್ಭದಲ್ಲೂ ನಿರ್ದಾಕ್ಷಿಣ್ಯ ಕ್ರಮಗಳನ್ನು ತೆಗೆದುಕೊಳ್ಳಲು ಹಿಂದೆ ಮುಂದೆ ನೋಡದ ಹೆಣ್ಣಿನ ನಿರ್ಧಾರಗಳೇ ಈ ರಾಷ್ಟ್ರಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಕಾರಣ ಎಂದರೆ ಅತಿಶಯೊಕ್ತಿಯಲ್ಲ.
ನ್ಯೂಜಿಲೆಂಡ್
ನ್ಯೂಜಿಲೆಂಡ್ ಇಲ್ಲಿನ ಪ್ರಧಾನಿ ಜಸಿಂಡಾ ಆರ್ಡರ್ನ್
ನ್ಯೂಜಿಲೆಂಡ್ ನಲ್ಲಿ ಇಲ್ಲಿಯವರೆಗೆ 19 ಸಾವುಗಳು ಮತ್ತು 1,474 ಕೊರೋನಾ ಪ್ರಕರಣಗಳು ದಾಖಲಾಗಿದ್ದು, 1,229 ಪ್ರಕರಣಗಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಐದು ವಾರಗಳ ಕಟ್ಟುನಿಟ್ಟಿನ ಲಾಕ್‌ಡೌನ್ ಕ್ರಮಗಳಿಂದಾಗಿ, ಕೊರೋನ ವೈರಸ್ ಅನ್ನು ತಡೆಯುವ ಮಹತ್ವಾಕಾಂಕ್ಷೆಯ ಗುರಿಯನ್ನು ನ್ಯೂಜಿಲೆಂಡ್ ಸಾಧಿಸಿದೆ. ಇದನ್ನು ನ್ಯೂಜಿಲೆಂಡ್‌ನ ಪ್ರಧಾನ ಮಂತ್ರಿ ಜಸಿಂಡಾ ಅರ್ಡೆರ್ನ್ “ಆಧುನಿಕ ಇತಿಹಾಸದಲ್ಲಿ ನ್ಯೂಜಿಲೆಂಡ್‌ನವರ ಮೇಲೆ ಕಟ್ಟುನಿಟ್ಟಾದ ನಿರ್ಬಂಧಗಳು” ಎಂದು ಬಣ್ಣಿಸಿದ್ದಾರೆ. ನಾವು ಒಟ್ಟಾಗಿ ಕೊರೊನಾ ವಿರುದ್ಧ ಅಸಾಧ್ಯವಾದ ರೀತಿಯಲ್ಲಿ ಕೆಲಸ ಮಾಡಿ ಜಯ ಸಾಧಿಸಿದ್ದೇವೆ ಎಂದು ಅವರು ನ್ಯೂಜಿಲೆಂಡ್‌ನ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ಐಸ್ ಲ್ಯಾಂಡ್
ಐಸ್ ಲ್ಯಾಂಡ್ ಪ್ರಧಾನಿ ಕಟ್ರಾನ್ ಜಾಕೋಬ್ಸ್ಡಾಟ್ಟಿರ್
ಐಸ್ ಲ್ಯಾಂಡ್ ನಲ್ಲಿ ಇಲ್ಲಿಯವರೆಗೆ ಒಟ್ಟು 1,795
ಪ್ರಕರಣಗಳು ವರದಿಯಾಗಿದೆ. ಅದರಲ್ಲಿ 1,636 ಪ್ರಕರಣಗಳು ಗುಣಮುಖರಾಗಿದ್ದರೆ, 10 ಪ್ರಕರಣಗಳು ಸಾವು ಕಂಡಿವೆ.
ಕೊರೊನಾವೈರಸ್ ಅನ್ನು ಯಾರು ಹೊಂದಿದ್ದಾರೆ ಮತ್ತು ಅದು ಹೇಗೆ ಹರಡುತ್ತದೆ ಎಂಬುದರ ಕುರಿತು ಗಮನ ಹರಿಸಿದ ಐಸ್‌ಲ್ಯಾಂಡ್ ದ್ವೀಪ ರಾಷ್ಟ್ರವು ಸೋಂಕು ಹರಡುವುದನ್ನು ತಡೆಯಲು ಯಶಸ್ವಿಯಾಗಿದೆ.
ಸಂದರ್ಶನವೊಂದರಲ್ಲಿ ಪ್ರಧಾನ ಮಂತ್ರಿ ಕಟ್ರಿನ್ ಜಾಕೋಬ್ಸ್ಡಾಟ್ಟಿರ್ ಅವರು ಇಲ್ಲಿಯವರೆಗೆ 1800 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಕೇವಲ 10 ಸಾವುಗಳು ಮಾತ್ರ ಸಂಭವಿಸಿದೆ ಎಂದು ಹೇಳಿದ್ದಾರೆ. ನಾವು ಸಾಂಕ್ರಾಮಿಕ ರೋಗದ ಮೇಲೆ ಹಿಡಿತ ಸಾಧಿಸುತ್ತಿದ್ದೇವೆ ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿದ ಅವರು ವಿಶೇಷವಾಗಿ ಸಾಮೂಹಿಕ ಪರೀಕ್ಷೆ, ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳನ್ನು ಅನುಸರಿಸುವ ಮೂಲಕ ಈ ಸೋಂಕನ್ನು ತಡೆಗಟ್ಟಿದ್ದೇವೆ ಎಂದು ಹೇಳಿದ್ದಾರೆ.
ಸಿಂಟ್ ಮಾರ್ಟನ್
ಸಿಂಟ್ ಮಾರ್ಟನ್ ಪ್ರಧಾನಿ ಸಿಲ್ವೆರಿಯಾ ಜೇಕಬ್ಸ್
ಕೆರಿಬಿಯನ್ ದ್ವೀಪದ ಸಿಂಟ್ ಮಾರ್ಟನ್ ನಲ್ಲಿ ಇಲ್ಲಿಯವರೆಗೆ ವರದಿಯಾಗಿರುವ ಕೊರೋನಾ ಪ್ರಕರಣಗಳು 75 ಮತ್ತು ಅದರಲ್ಲಿ 13 ಪ್ರಕರಣಗಳು ಸಾವನ್ನು ಕಂಡಿದ್ದರೆ, ಗುಣಮುಖವಾದ ಪ್ರಕರಣಗಳು 33.
ಜಗತ್ತಿನಾದ್ಯಂತ ಕೊರೊನಾ ಸೋಂಕು ಹರಡಲು ಪ್ರಾರಂಭಿಸಿದಾಗ ಕೆರಿಬಿಯನ್ ದ್ವೀಪವಾದ ಸಿಂಟ್ ಮಾರ್ಟೆನ್ ನಲ್ಲಿ 17 ಮಾರ್ಚ್ 2020 ಮೊದಲನೆಯ ಪ್ರಕರಣ ವರದಿಯಾಗಿತ್ತು. ಕೊರೊನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿದಂತೆ ವರ್ಷಕ್ಕೆ 500,000 ಪ್ರವಾಸಿಗರನ್ನು ಸ್ವಾಗತಿಸುವ ಸಣ್ಣ ದ್ವೀಪ ದೇಶವನ್ನು ಬಹಳ ಅಪಾಯದಲ್ಲಿದೆ ಎಂದು ತಿಳಿದ ಪ್ರಧಾನಿ ಸಿಲ್ವೆರಿಯಾ ಜೇಕಬ್ಸ್, ತನ್ನ ದೇಶದ 44 ಸಾವಿರ ಜನರಿಗೆ ಒಂದು ಸಾಲಿನ ಆದೇಶ ಹೊರಡಿಸಿದಳು. ಎರಡು ವಾರ ಅಲ್ಲಿ ಇಲ್ಲಿ ತಿರುಗುವುದನ್ನು ಬಿಡಿ. ನಿಮ್ಮ ಮನೆಯಲ್ಲಿ ಏನು ಇದೆಯೋ ಅದನ್ನೇ ತಿನ್ನಿ. ನಿಮ್ಮ ಮನೆಯಲ್ಲಿ ನೀವು ಇಷ್ಟಪಡುವ ಬ್ರೆಡ್ ಇಲ್ಲದಿದ್ದರೆ, ರಸ್ಕ್ ತಿನ್ನಿ, ಅದಿಲ್ಲ ಇದಿಲ್ಲ ಅಂತ ಹೊರಗೆ ಬಂದರೆ ಹುಶಾರ್ ಅಂತ ಗದರಿಸಿದಳು. ಜನ ಸುಮ್ಮಗೆ ಮನೆಯೊಳಗೆ ಇದ್ದರು. ಕೊರೋನಾ ಪ್ರಕರಣ 75 ದಾಟಲಿಲ್ಲ.
ತೈವಾನ್
ತೈವಾನ್ ಪ್ರಧಾನಿ ತ್ಸೈ ಇಂಗ್ ವೆನ್
ಇಲ್ಲಿಯವರೆಗೆ 429 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದರೆ, 6 ಸಾವುಗಳು ಸಂಭವಿಸಿವೆ. 307 ಪ್ರಕರಣಗಳು ಗುಣಮುಖರಾಗಿದ್ದಾರೆ.
ಆಸ್ಟ್ರೇಲಿಯಾ ಮತ್ತು ತೈವಾನ್ ಸುಮಾರು 24 ಮಿಲಿಯನ್ ಜನಸಂಖ್ಯೆಯನ್ನು ಹೊಂದಿವೆ, ಮತ್ತು ಎರಡೂ ಚೀನಾದ ಮುಖ್ಯ ಭೂಭಾಗದೊಂದಿಗೆ ವ್ಯಾಪಾರ ಮತ್ತು ಸಾರಿಗೆ ಸಂಪರ್ಕವನ್ನು ಹೊಂದಿವೆ. ಚೀನಾದಲ್ಲಿ ಉಗಮವಾದ ಕೊರೊನಾ ಸೋಂಕು ಜಗತ್ತಿನ ಎಲ್ಲೆಡೆಯೂ ತನ್ನ ಕಬಂಧಬಾಹುವನ್ನು ಚಾಚಿ ಮರಣ ಮೃದಂಗ ಬಾರಿಸುತ್ತಿದ್ದರೆ, ತೈವಾನ್ ಕೊರೊನಾ ಸೋಂಕು ವೈರಸ್ ಅನ್ನು ನಿಯಂತ್ರಣದಲ್ಲಿಟ್ಟುಕೊಂಡಿದೆ.
ಫೀಲ್ಯಾಂಡ್
ಫೀಲ್ಯಾಂಡ್ ಪ್ರಧಾನಿ ಸನ್ನಾ ಮರಿನ್
ಇಲ್ಲಿಯವರೆಗೆ ವರದಿಯಾಗಿರುವ ಕೊರೊನಾ ಪ್ರಕರಣಗಳು 4740 ಮತ್ತು ಸಾವನ್ನಪ್ಪಿದವರ ಸಂಖ್ಯೆ 199. 2800 ಪ್ರಕರಣಗಳು ಗುಣಮುಖರಾಗಿದ್ದಾರೆ. ಕೊರೋನ ವೈರಸ್ ಸೋಂಕಿನ ಹರಡುವಿಕೆಯ ಪ್ರಮಾಣ ಫೀಲ್ಯಾಂಡ್ ನಲ್ಲಿ ತೀವ್ರವಾಗಿ ಕಡಿಮೆಯಾಗಿದ್ದು, ಇದು ಸರ್ಕಾರ ಜಾರಿಯಲ್ಲಿರುವ ನಿರ್ಬಂಧಗಳನ್ನು ಸಡಿಲಿಸಲು ಅವಕಾಶ ನೀಡಿದೆ.
ಇದು ಕೆಲವು ಉದಾಹರಣೆಗಳು ಅಷ್ಟೇ. ಜರ್ಮನಿಯಿಂದ ನ್ಯೂಜಿಲೆಂಡ್ ಮತ್ತು ಡೆನ್ಮಾರ್ಕ್‌ನಿಂದ ತೈವಾನ್‌ವರೆಗೆ ಮಹಿಳಾ ನಾಯಕತ್ವದ ರಾಷ್ಟ್ರಗಳು ಕೊರೋನ ವೈರಸ್ ಬಿಕ್ಕಟ್ಟನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.