ಕೊರೋನಾ ಎಂಬ ಮಹಾ ಮಾರಿ ಸೃಷ್ಟಿಸಿದ ಅವಾಂತರ ಅಪಾರ. ಅನೇಕ ಸನ್ನಿವೇಶಗಳನ್ನು ಕೇಳುವಾಗ ಮನ ನೋವಿನಿಂದ ರೋಧಿಸುತ್ತದೆ. ಜನರ ಮಧ್ಯೆ ಗೋಡೆಯನ್ನು ಸೃಷ್ಟಿಸಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಕೊರೋನಾದಿಂದ ಬಹಳಷ್ಟು ಹೃದಯವಿದ್ರಾವಕ ಘಟನೆಗಳು ಸೃಷ್ಟಿಯಾಗಿದ್ದರೂ, ಎರಡು ಮನಮಿಡಿಯುವ ಘಟನೆಗಳು ಇಲ್ಲಿವೆ.
ಘಟನೆ 1. ಅದು ನಮ್ಮ ಪಕ್ಕದ ರಾಜ್ಯ ಕೇರಳ.
ಹಾಸಿಗೆಯಿಂದ ತಂದೆ ಕೆಳಗೆ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ ಎಂಬ ಸುದ್ದಿ ತಿಳಿದು ಕತಾರ್ ನಲ್ಲಿದ್ದ 30 ವರ್ಷದ ಲಿನೋ ಆಬೆಲ್ ಗಾಬರಿಯಾಗುತ್ತಾರೆ. ತಂದೆಯ ಆರೋಗ್ಯ ವಿಚಾರಿಸಲೆಂದು ಅಬೆಲ್ ಮಾರ್ಚ್ 8ರಂದು ತನ್ನೂರು ಕೇರಳದ ಕೋಟ್ಟಯಂಗೆ ತೆರಳಲು ವಿಮಾನವೇರುತ್ತಾರೆ. ಭಾರತಕ್ಕೆ ಬರುತ್ತಲೇ ಆಬೆಲ್ ಗೆ ವಿಪರೀತ ಕೆಮ್ಮು ಕಾಣಿಸಿಕೊಳ್ಳುತ್ತದೆ.. ಕೊರೋನಾ ಸೋಂಕಿತ ರಾಷ್ಟ್ರ ಕತಾರ್ ನಿಂದ ಬಂದಿದ್ದಾರೆ ಎಂಬ ಕಾರಣಕ್ಕೆ ಅವರನ್ನು ವಿಮಾನ ನಿಲ್ದಾಣದಿಂದ ಕೊಟ್ಟಾಯಂನ ಮೆಡಿಕಲ್ ಕಾಲೇಜು ಆಸ್ಪತ್ರೆಯ ಐಸೋಲೇಷನ್ ವಾರ್ಡ್ಗೆ ಶಿಫ್ಟ್
ಮಾಡಲಾಗುತ್ತದೆ. ಅದೇ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ತಂದೆ ಹೋರಾಡುತ್ತಿದ್ದರೆ, ಆಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿ ಮಗ ಬಂಧಿ. ತಂದೆ – ಮಗ ಒಂದೇ ಆಸ್ಪತ್ರೆಯಲ್ಲಿದ್ದರೂ ತಂದೆಯನ್ನು ನೋಡುವ ಅವಕಾಶ ಮಗನಿಗೆ ಸಿಗುವುದಿಲ್ಲ. ಮಾರ್ಚ್ 9ರಂದು ಪಾಶ್ವವಾಯು(ಸ್ಟ್ರೋಕ್)ಗೆ ತುತ್ತಾದ ತಂದೆ ಸಾವನ್ನಪ್ಪುತ್ತಾರೆ. ತಂದೆಯ ಮೃತ ದೇಹವನ್ನು ಆಸ್ಪತ್ರೆಯಿಂದ ಕೊಂಡೊಯ್ಯುವಾಗ, ತಾನಿದ್ದ ಐಸೋಲೇಷನ್ ವಾರ್ಡ್ ನ ಕಿಟಕಿಯ ಮೂಲಕ ತಂದೆಯ ಮುಖ ನೋಡಿ ಆಬೆಲ್ ಕಣ್ಣೀರು ಸುರಿಸುತ್ತಾರೆ.
ಅವರ ಅಸಹಾಯಕ ಸ್ಥಿತಿಯನ್ನು ನೋಡಿದರೂ ಆಸ್ಪತ್ರೆ ಸಿಬ್ಬಂದಿ ಕೂಡ ಏನೂ ಮಾಡಲಾಗದ ಪರಿಸ್ಥಿತಿ. ಆಬೆಲ್ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಾಗದೆ ಕೊನೆಗೆ ವಿಡಿಯೋ ಕಾಲ್ ಮೂಲಕ ವೀಕ್ಷಿಸಬೇಕಾಯಿತು.
ಘಟನೆ 2. ಇಟಲಿಯ ನೇಪಲ್ಸ್
ಇಟಲಿಯ ನೇಪಲ್ಸ್ ನಲ್ಲಿ ತನ್ನ ಕುಟುಂಬದೊಂದಿಗೆ ಥೆರೇಸಾ ಫ್ರಾನ್ಸಿಸ್ ವಾಸವಾಗಿರುತ್ತಾಳೆ. ಥೆರೇಸಾ ಫ್ರಾನ್ಸಿಸ್ ಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡು ಅವಳ ಆರೋಗ್ಯ ವಿಪರೀತ ಹದಗೆಡುತ್ತದೆ. ಮಾರ್ಚ್ 7ರಂದು ಥೆರೇಸಾ ಕೊರೊನಾ ಸೋಂಕುಗೆ ಕೊನೆಯುಸಿರೆಳೆಯುತ್ತಾಳೆ. ಆದರೆ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಯಾವ ಆಸ್ಪತ್ರೆಗಳೂ ಆಕೆಯ ಮೃತದೇಹ ಒಯ್ಯಲು ಮುಂದೆ ಬರುವುದಿಲ್ಲ. ಮನೆಯಲ್ಲಿರುವ ಆಕೆಯ ಸಹೋದರ ಏನು ಮಾಡಲು ತೋಚದೇ ಸಾಮಾಜಿಕ ಜಾಲತಾಣದ ಮೊರೆ ಹೋಗುತ್ತಾನೆ. ಪಕ್ಕದಲ್ಲೇ ಬಿದ್ದಿರುವ ತನ್ನ ತಂಗಿಯ ಮೃತದೇಹವನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮುಖಾಂತರ ತೋರಿಸಿ, ನನ್ನ ತಂಗಿ ಕೊನೆಯುಸಿರೆಳೆದಿದ್ದಾಳೆ, ಆದರೆ ಆಕೆಯ ಅಂತ್ಯ ಸಂಸ್ಕಾರ ಮಾಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅವಳ ಮೃತ ದೇಹ ಒಯ್ಯಲು ಯಾವ ಆಸ್ಪತ್ರೆಯೂ ಮುಂದೆ ಬರುತ್ತಿಲ್ಲ. ಇಟಲಿ ನಮ್ಮನ್ನು ಅನಾಥರನ್ನಾಗಿಸಿದೆ ಎಂದು ತಂಗಿಯ ಶವದ ಮುಂದೆ ಕಣ್ಣೀರಿಡುತ್ತಾನೆ. ಅಂತಿಮವಾಗಿ 36 ಗಂಟೆಗಳ ನಂತರ ರಕ್ಷಣಾತ್ಮಕ ಬಟ್ಟೆ ಧರಿಸಿದ ಕೆಲಸಗಾರರು ಆಗಮಿಸಿ, ದೇಹವನ್ನು ನೇರವಾಗಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತಿಮ ಸಂಸ್ಕಾರ ಮಾಡಿದ್ದಾರೆ.
ಕೊರೋನಾ ಎಂಬ ವೈರಸ್ ಸಮಸ್ತ ಮನುಕುಲಕ್ಕೆ ಸವಾಲು ಹಾಕಿ ದೈತ್ಯಾಕಾರವಾಗಿ ಜಗತ್ತನ್ನೇ ಕಾಡುತ್ತಿದೆ. ಇವೆಲ್ಲವೂ ಕೊರೊನಾ ವೈರಸ್ ಸೃಷ್ಟಿಸಿದ ಒಂದೆರಡು ಘಟನೆಗಳು ಅಷ್ಟೇ. ಇಂತಹ ಅದೆಷ್ಟೋ ಹೊರಗಿನ ಜಗತ್ತಿಗೆ ಗೊತ್ತಾಗದ ಕಣ್ಣೀರಿನ ಘಟನೆಗಳು ಇವೆಯೋ ಗೊತ್ತಿಲ್ಲ.









