ಕೊರೋನಾ ಸೋಂಕು ಇನ್ನೆಷ್ಟು ದಿನ ? ಈ ಬಗ್ಗೆ ಖ್ಯಾತ ವೈದ್ಯರಾದ ಡಾ. ಶ್ರೀನಿವಾಸ ಕಕ್ಕಿಲಾಯರಿಂದ ಮಾಹಿತಿ
ಮಂಗಳೂರು, ಅಗಸ್ಟ್ 16: ದೇಶದಲ್ಲಿ ಕೊರೋನಾ ಸೋಂಕು ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದ್ದು, 25 ಲಕ್ಷದ ಗಡಿ ದಾಟಿದೆ. ಜನರ ಮನಸ್ಸಿನಲ್ಲಿ ಕೊರೋನಾ ಭೀತಿ ಮನೆ ಮಾಡಿದ್ದು, ಕೊರೋನಾ ಕಾಲಘಟ್ಟ ಇನ್ನೆಷ್ಟು ದಿನ ಮುಂದುವರಿಯಲಿದೆ ಎಂಬ ಪ್ರಶ್ನೆಗಳು ಮೂಡಿವೆ. ಈ ಎಲ್ಲಾ ಪ್ರಶ್ನೆಗಳಿಗೆ ಮಂಗಳೂರಿನಲ್ಲಿ ಕಳೆದ 28 ವರ್ಷಗಳಿಂದ ವೈದ್ಯಕೀಯ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಖ್ಯಾತ ವೈದ್ಯರಾದ ಡಾ. ಶ್ರೀನಿವಾಸ ಕಕ್ಕಿಲಾಯ ಉತ್ತರಿಸಿದ್ದಾರೆ.
ಕೋವಿಡ್ -19 ರ ಹರಡುವಿಕೆಯು ಡಿಸೆಂಬರ್ ವೇಳೆಗೆ ಭಾರತದಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಅಧ್ಯಯನಗಳು ತಿಳಿಸಿವೆ ಮತ್ತು ಆಗ ದೇಶದ 40% ಜನರು ಮಾತ್ರ ಸೋಂಕಿಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ಡಾ. ಶ್ರೀನಿವಾಸ ಕಕ್ಕಿಲಾಯ ಹೇಳಿದ್ದಾರೆ.
ಮುಂಬೈ, ನವದೆಹಲಿ ಮತ್ತು ಇತರ ಪ್ರಮುಖ ನಗರಗಳಲ್ಲಿ ಕೋವಿಡ್ -19 ಹರಡುವಿಕೆಯ ತೀವ್ರತೆಯು ಮೊದಲಿಗಿಂತ ಕಡಿಮೆಯಾಗಿದೆ. ಇತರ ನಗರಗಳು ಮತ್ತು ಪಟ್ಟಣಗಳಲ್ಲಿ ಕೂಡ, ಮುಂದಿನ ನಾಲ್ಕು ತಿಂಗಳಲ್ಲಿ ಇದು ಕಡಿಮೆಯಾಗಲಿದೆ ಎಂದು ಡಾ. ಕಕ್ಕಿಲಾಯ ತಿಳಿಸಿದ್ದು,
ಸೋಂಕಿತರು, ಸೋಂಕಿತರಿಗೆ ಚಿಕಿತ್ಸೆ ನೀಡುವವರು ಮತ್ತು ಸೋಂಕಿತರೊಂದಿಗೆ ನಿಕಟ ಸಂಪರ್ಕದಲ್ಲಿರುವವರು ಮಾಸ್ಕ್ ಧರಿಸಿ ಕೋವಿಡ್ -19 ಹರಡುವುದನ್ನು ತಡೆಯಬಹುದು. ಸೋಂಕಿತರು ಸ್ಪರ್ಶಿಸಿದ ವಸ್ತುಗಳಿಂದ ಕೋವಿಡ್ ಸೋಂಕುಗಳು ಹರಡುತ್ತವೆ ಎನ್ನುವುದು ಸತ್ಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಕೊರೋನಾ ವಿರುದ್ಧ ಹೋರಾಡಲು ಕೆಲವು ಲಸಿಕೆಗಳು ಮಾರುಕಟ್ಟೆಗೆ ಪ್ರವೇಶಿಸಿದ್ದರೂ, ಕೋವಿಡ್ -19 ಚಿಕಿತ್ಸೆಗೆ ನಿರ್ದಿಷ್ಟ ಔಷಧಿ ಸಹಾಯ ಮಾಡುತ್ತದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಇಲ್ಲಿಯವರೆಗೆ ಕೊರೋನಾ ಸೋಂಕನ್ನು ನಿರ್ಮೂಲನೆ ಮಾಡುವ ಔಷಧಿಯನ್ನು ಅಭಿವೃದ್ಧಿಪಡಿಸಲಾಗಿಲ್ಲ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.
ಸೋಂಕಿತರಲ್ಲಿ 99% ಜನರಿಗೆ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಹೇಳಿದ ವೈದ್ಯರು ಮಧುಮೇಹ, ಮೂತ್ರಪಿಂಡ, ಪಿತ್ತಜನಕಾಂಗದ ಕಾಯಿಲೆ, ಹೃದಯ ಸಮಸ್ಯೆ ಮತ್ತು ಕ್ಯಾನ್ಸರ್ ನಿಂದ ಬಳಲುತ್ತಿರುವವರಿಗೆ ಕೋವಿಡ್ ಸೋಂಕು ಅಪಾಯಕಾರಿ ಎಂದು ಹೇಳಿದ್ದಾರೆ. ಅವರಿಗೆ ತಕ್ಷಣವೇ ಚಿಕಿತ್ಸೆ ದೊರಕಿದರೆ, ಅವರು ಸೋಂಕಿನಿಂದ ಚೇತರಿಸಿಕೊಳ್ಳುವ ಸಂಭವವಿದೆ. 10 ಲಕ್ಷ ಸೋಂಕಿತರಲ್ಲಿ ನಾಲ್ಕರಿಂದ ಐದು ಜನರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ವೈದ್ಯರಾದ ಡಾ. ಶ್ರೀನಿವಾಸ ಕಕ್ಕಿಲಾಯ ತಿಳಿಸಿದ್ದಾರೆ.
ಕೋವಿಡ್ ಸೋಂಕನ್ನು ತಡೆಗಟ್ಟಲು ಕಷಾಯ ಮತ್ತು ಮನೆಮದ್ದುಗಳು ಪರಿಹಾರವಲ್ಲ ಎಂದು ಎಚ್ಚರಿಸಿದ ವೈದ್ಯರು ಕಷಾಯವನ್ನು ನಿರಂತರವಾಗಿ ಕುಡಿಯುವುದರಿಂದ ಆಮ್ಲೀಯತೆಯಂತಹ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಅಷ್ಟೇ ಅಲ್ಲ ಔಷಧೀಯ ಸಸ್ಯಗಳಲ್ಲಿನ ಆಲ್ಕಲಾಯ್ಡ್ ದೇಹಕ್ಕೆ ಹಾನಿಯನ್ನುಂಟುಮಾಡಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.