ಕಾರ್ಮಿಕ ಹಾಗೂ ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ಮತ್ತು ಅವರ ಪತ್ನಿಗೆ ಕೊರೋನಾ ಸೋಂಕು
ಬೆಂಗಳೂರು, ಸೆಪ್ಟೆಂಬರ್06: ಕರ್ನಾಟಕ ಸರ್ಕಾರದ ಕಾರ್ಮಿಕ ಹಾಗೂ ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ಮತ್ತು ಅವರ ಪತ್ನಿ ವನಜಾಕ್ಷಿ ಹೆಬ್ಬಾರ್ ಗೆ ಕೊರೋನವೈರಸ್ ಸೋಂಕು ದೃಢಪಟ್ಟಿದೆ. ಆದರೆ ಅವರಲ್ಲಿ ಕೋವಿಡ್-19 ಸೋಂಕಿನ ಯಾವುದೇ ಗುಣಲಕ್ಷಣಗಳಿಲ್ಲದ ಹಿನ್ನೆಲೆಯಲ್ಲಿ ಅವರು ಮನೆಯಿಂದಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾನು ಮತ್ತು ನನ್ನ ಪತ್ನಿ ಕೋವಿಡ್ -19 ಪರೀಕ್ಷೆಗೆ ಒಳಗಾಗಿದ್ದೇವೆ ಮತ್ತು ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿರುವುದು ಕಂಡುಬಂದಿದೆ.
ಕೊರೋನವೈರಸ್ ನ ಯಾವುದೇ ಲಕ್ಷಣಗಳು ಇಲ್ಲದಿರುವುದರಿಂದ, ವೈದ್ಯರ ಸಲಹೆಯ ಮೇರೆಗೆ ನಾವು ಹೋಂ ಕ್ವಾರಂಟೈನ್ ಗೆ ಒಳಗಾಗಲು ನಿರ್ಧರಿಸಿದ್ದೇವೆ ಮತ್ತು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದು ಹೆಬ್ಬಾರ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ತಾವು ಮತ್ತು ತಮ್ಮ ಪತ್ನಿ ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, 63 ವರ್ಷದ ಶಿವರಾಮ ಹೆಬ್ಬಾರ್ ಶೀಘ್ರವಾಗಿ ಗುಣಮುಖರಾಗಲೆಂದು ಹಾರೈಸಿದ್ದಾರೆ.
ಈ ಮೊದಲು ಸಿಎಂ ಯಡಿಯೂರಪ್ಪ, ಅರಣ್ಯ ಸಚಿವ ಆನಂದ್ ಸಿಂಗ್, ಪ್ರವಾಸೋದ್ಯಮ ಸಚಿವ ಸಿ ಟಿ ರವಿ, ಆರೋಗ್ಯ ಸಚಿವ ಶ್ರೀರಾಮುಲು, ಪ್ರತಿಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರಿಗೆ ಕೋವಿಡ್ -19 ಧೃಡಪಟ್ಟಿದ್ದು, ಚಿಕಿತ್ಸೆಯ ಬಳಿಕ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.