ಅಟ್ಲಾಂಟಾ (ಜಾರ್ಜಿಯಾ): ಹೆಮ್ಮಾರಿ ಕೊರೊನಾ ವೈರಸ್ ಅಬ್ಬರಕ್ಕೆ ಮನುಕುಲ ತತ್ತರಿಸಿ ಹೋಗಿದೆ. ಕಿಲ್ಲರ್ ಕೊರೊನಾ ಸಿಕ್ಕ ಸಿಕ್ಕವರ ದೇಹಹೊಕ್ಕಿ ಮರಣ ಮೃದಂಗ ಬಾರಿಸುತ್ತಿದೆ. ಏತನ್ಮಧ್ಯೆ ಅಂಟ್ಲಾಂಟಾದಲ್ಲಿ ನಾಯಿಯೊಂದಕ್ಕೆ ಕೊರೊನಾ ವೈರಸ್ ದೃಢಪಟ್ಟಿದೆ. ಈ ಮೂಲಕ ಯುಎಸ್ ನಲ್ಲಿ ಎರಡನೇ ನಾಯಿಗೆ ಕೋವಿಡ್-19 ಬಾಧಿಸಿದಂತಾಗಿದೆ.
ನಾಯಿಯ ಮಾಲೀಕರಿಗೂ ಕೊರೊನಾ ವೈರಸ್ ದೃಢಪಟ್ಟಿತ್ತು. ಬಳಿಕ ಶ್ವಾನ ಕೋವಿಡ್-19ನೊಂದಿಗೆ ನರವೈಜ್ಞಾನಿಕ ಕಾಯಿಲೆಯಿಂದ ಬಳಲುತ್ತಿತ್ತು ಎಂದು ಜಾರ್ಜಿಯಾ ಆರೋಗ್ಯ ಇಲಾಖೆ ತಿಳಿಸಿದೆ.
ಶ್ವಾನದ ಪರೀಕ್ಷಾ ವರದಿಯಲ್ಲಿ ಕೋವಿಡ್-19 ಗೆ ಕಾರಣವಾಗುವ SARS-CoV-2 ಪಾಸಿಟಿವ್ ಬಂದಿದ್ದು, ನರವೈಜ್ಞಾನಿಕ ಕಾಯಿಲೆ ಉಲ್ಬಣಗೊಳ್ಳುತ್ತಿದ್ದಂತೆಯೇ ನಾಯಿಯನ್ನು ದಯಾಮರಣಗೊಳಿಸಲಾಗಿದೆ.