ಕೊರೊನಾ ಹತ್ತಿಕ್ಕಲು ಕನ್ನಡಿಗ ಸಂಶೋಧರ ದಿಟ್ಟ ಹೆಜ್ಜೆ ಯಶಸ್ವೀ..!

ಬೆಂಗಳೂರು: ಇದುವರೆಗೂ ವಿದೇಶಗಳಿಂದ ಆಮದು ಮಾಡಿಕೊಂಡು ಕೋವಿಡ್-19 ಸೋಂಕು ಹತ್ತಿಕ್ಕಲು ಉಪಯೋಗಿಸಲಾಗುತ್ತಿದ್ದ ಆರು ಪ್ರಮುಖ ಉತ್ಪನ್ನಗಳನ್ನು ಇದೀಗ ದೇಶಿಯವಾಗಿಯೇ ಬೆಂಗಳೂರಿನ, ಅದರಲ್ಲೂ ಕನ್ನಡದ ವಿಜ್ಞಾನಿಗಳು ಮತ್ತು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಇದರೊಂದಿಗೆ ಕೋವಿಡ್ ವಿರುದ್ಧದ ಸಮರದಲ್ಲಿ ರಾಜ್ಯಕ್ಕೆ ಮಹತ್ವದ ಮುನ್ನಡೆ ಸಿಕ್ಕಿದೆ.
ರಾಜ್ಯದ ಐಟಿ-ಬಿಟಿ ಇಲಾಖೆ ವ್ಯಾಪ್ತಿಯ ಬೆಂಗಳೂರು ಬಯೋ ಇನ್ನೋವೇಷನ್ ಕೇಂದ್ರದ ಅಡಿಯಲ್ಲಿ ಸಂಶೋಧನೆಯಲ್ಲಿ ನಿರತವಾಗಿರುವ ವಿವಿಧ ಸ್ಟಾರ್ಟ್‍ಅಪ್ ಗಳು ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿವೆ. ಇದರಿಂದಾಗಿ ನಾವು ಬಹುತೇಕ ವಿದೇಶಿ ಅವಲಂಬನೆಯನ್ನು ತಗ್ಗಿಸಬಹುದಾಗಿದೆ. ಜತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ ಪರಿಕಲ್ಪನೆಯ ಸ್ಫೂರ್ತಿಯಿಂದ ಇವೆಲ್ಲ ಸಿದ್ಧವಾಗಿವೆ ಎಂದು ಐಟಿ-ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.


ಈ ಆರೂ ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಡಿಸಿಎಂ ಅಶ್ವತ್ಥ ನಾರಾಯಣ್, ಇವುಗಳಿಗೆ ಐಸಿಎಂಆರ್ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಮಾನ್ಯತೆ ಸಿಕ್ಕಿದೆ ಎಂಬುದನ್ನು ಪ್ರಕಟಿಸಿದರು.
ಈ ಕ್ಷಣದಿಂದಲೇ ಇವೆಲ್ಲವನ್ನು ಕೊರೊನಾ ತಡೆಗೆ ಎಲ್ಲರೂ ಬಳಸಬಹುದು, ಖರೀದಿ ಮಾಡಬಹುದು. ಜತೆಗೆ ಸರಕಾರವು ಈ ಉತ್ಪನ್ನಗಳಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಲಿದೆ ಎಂದು ಭರವಸೆ ನೀಡಿದರು.
ಐಟಿ-ಬಿಟಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಮಣರೆಡ್ಡಿ, ಬೆಂಗಳೂರು ಬಯೊ ಇನ್ನೊವೇಷನ್ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಡಾ.ಜಿತೇಂದ್ರ ಕುಮಾರ್, ಉಪ ಮುಖ್ಯಮಂತ್ರಿಯವರ ಕಾರ್ಯದರ್ಶಿ ಪಿ.ಪ್ರದೀಪ್ ಮತ್ತಿತರರು ಇದ್ದರು.

ಕೊರೊನಾ ಹತ್ತಿಕ್ಕುವ ಉತ್ಪನ್ನಗಳ ಮಾಹಿತಿ ಇಲ್ಲಿದೆ..
1. ಶೀಲೆಡೆಕ್ಸ್ 24
ಕೋವಿಡ್-19 ಅನ್ನು ಪರಿಣಾಮಕಾರಿಯಾಗಿ ನಿರ್ಮೂಲನೆ ಮಾಡುವ ಸಾಧನವಿದು. ಇದು ಮೈಕ್ರೋವೇವ್ ಬಾಕ್ಸ್ ರೀತಿಯಲ್ಲಿ ವಿವಿಧ ಗಾತ್ರಗಳಲ್ಲಿ ಇರುತ್ತದೆ. (ಒಂದು ಫ್ರಿಜ್ ಗಾತ್ರದಲ್ಲೂ ಇದೆ). ಇದರಲ್ಲಿ ಅಲ್ಟ್ರಾವೈಲೇಟ್ ರೇಸ್ ಇರುತ್ತದೆ, ಈ ರೇಸ್ ಬಿದ್ದಾಗ ವೈರಸ್ ಕೇವಲ 15 ಸೆಕೆಂಡುಗಳಲ್ಲಿ ಸಾಯುತ್ತದೆ. ನಮಗೆ ಯಾವುದೇ ವಸ್ತುವಿನ (ಉದಾ: ಪರ್ಸ್, ಮೊಬೈಲ್, ಪೆನ್ನು) ಮೇಲೆ ವೈರಸ್ ಇದೆ ಅಂತ ಅನುಮಾನವಿದ್ದರೆ ಈ ಬಾಕ್ಸ್ ನಲ್ಲಿ ಆ ವಸ್ತುವನ್ನು ಹಾಕಿದರೆ ಸಾಕು. ಇದನ್ನು ಕಚೇರಿಗಳು, ಮನೆಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ ಮುಂತಾದೆಡೆ ಪ್ರವೇಶ ದ್ವಾರದಲ್ಲಿ ಇಟ್ಟು ಬಳಸಬಹುದು. ಅಲ್ಲಿ ಇಡುವುದರಿಂದ ಅಲ್ಲಿಂದ ಒಳಹೋಗುವ ಹೊರಬರುವ ಲಗೇಜ್‍ಗಳ ಮೇಲಿರುವ ವೈರಸ್‍ನ್ನು ನಾಶ ಮಾಡಬಹುದು. ಈ ಉತ್ಪನ್ನವನ್ನು ಬಯೋ ಫೀ ಕಂಪನಿಯ ರವಿಕುಮಾರ್ ಅವರು ಸಂಶೋಧಿಸಿ ತಯಾರಿಸಿದ್ದಾರೆ.

2. ಫ್ಲೋರೋಸೆನ್ಸ್ ಪ್ರೋಬ್ಸ್
ಇದು ಕೋವಿಡ್ ಕಿಟ್ ನಲ್ಲಿ ಇರಬಹುದಾದ ಪ್ರಮುಖ ಅಂಗ. ಇದು ಇಲ್ಲದಿದ್ದರೆ ವೈರಸ್ ಅನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಆರ್‍ಟಿ-ಪಿಸಿಆರ್ ಪರೀಕ್ಷೆಯಲ್ಲಿ ಫ್ಲೋರೋಸೆನ್ಸ್ ಪ್ರೋಬ್ಸ್ ಅನ್ನು ಬಳಸಲಾಗುತ್ತದೆ. ಭಾರತದಲ್ಲಿ ಕೋವಿಡ್ ಕಿಟ್ ತಯಾರಿಸುವ ಕಂಪನಿಗಳಿಗೆ ಈ ಸಂಶೋಧನೆ ವರದಾನವಾಗಿದೆ. ಇದು ಹೊರಬಂದ ಕಾರಣ ಕಿಟ್ ತಯಾರಿಸುವುದು ಸುಲಭವಾಗಲಿದೆ. ಇದನ್ನು ವಿಎನ್‍ಐಆರ್ ಸಂಸ್ಥೆಯ ಡಾ. ಗೋವಿಂದರಾಜು ಮತ್ತು ಡಾ. ಮೆಹರ್ ಪ್ರಕಾಶ್ ಅಭಿವೃದ್ಧಿಪಡಿಸಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಈ ಉತ್ಪನ್ನವೂ ಬಹಳ ದುಬಾರಿ ಮತ್ತು ಅಷ್ಟೇ ಸೂಕ್ಷ್ಮವೂ ಹೌದು. ಇದನ್ನು ವಿವಿಧ ದೇಶಗಳಿಂದ, ಮುಖ್ಯವಾಗಿ ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ನಮ್ಮಲ್ಲಿ ತಯಾರಿಸಿರುವ ಈ ಉತ್ಪನ್ನವೂ ಅತ್ಯಂತ ಉತ್ತಮ ಗುಣಮಟ್ಟವನ್ನು ಹೊಂದಿದೆ.

3. ಭ್ರೂಣ ನಿಗಾ ಯಂತ್ರ (ಫೀಟೆಲ್ ಮಾನಿಟರಿಂಗ್ ಡಿವೈಸ್)
ಕೋವಿಡ್ ಇದ್ದಾಗ ಗರ್ಭಿಣಿಯರು ನೇರವಾಗಿ ವೈದ್ಯರನ್ನು ಭೇಟಿಯಾಗಲು ಸಾಧ್ಯವಿಲ್ಲ. ಪಟ್ಟಿಯಾಕಾರಾದ ಈ ಉಪಕರಣದ ಮೂಲಕ ಭ್ರೂಣದ ಹೃದಯ ಬಡಿತವನ್ನೂ ವೈದ್ಯರು ತಿಳಿಯಬಹುದು. ಗರ್ಭಿಣಿ ಮಹಿಳೆ ಈ ಉಪಕರಣವನ್ನು ತಮ್ಮ ಹೊಟ್ಟೆ ಮೇಲಿಟ್ಟುಕೊಂಡರೆ ವೈದ್ಯರಿಗೆ ಎಲ್ಲ ಮಾಹಿತಿಯೂ ತಿಳಿಯುತ್ತದೆ. ಗರ್ಭಣಿಯರು ಮನೆಯಲ್ಲಿದ್ದೇ ಚಿಕಿತ್ಸೆ ಪಡೆಯಬಹುದು. ವರ್ಚುವಲ್ ಮೂಲಕವೇ ಚಿಕಿತ್ಸೆ ನೀಡಬಹುದು. ಈ ಯಂತ್ರವನ್ನು `ದಕ್ಷ್ ‘ ಎಂದು ಕರೆಯಲಾಗುತ್ತದೆ. ಜೆನಿತ್ರೀ ಕಂಪನಿಯ ಡಾ. ಅರುಣ್ ಅಗರವಾಲ್ ಇದನ್ನು ಸಂಶೋಧಿಸಿ ಅಭಿವೃದ್ಧಿಪಡಿಸಿದ್ದಾರೆ.

4. ವಿಟಿಎಂ (ವೈರಲ್ ಟ್ರಾನ್ಸ್‍ಪೋರ್ಟ್ ಮೀಡಿಯಾ )
ಡೆಕೊಂತೋ ಎಂಬ ಹೆಸರಿನ ಈ ಉತ್ಪನ್ನವನ್ನು ಡಿನೋವೋ ಬಯೋಲ್ಯಾಬ್ಸ್ ನ ಐಬಿಎಬಿಯ ಮಂಜುನಾಥ್ ಹಾಗೂ ದಿನೇಶ್ ಸಂಶೋಧಿಸಿ ತಯಾರಿಸಿದ್ದಾರೆ. ಇದು ಸದ್ಯದ ಸ್ಥಿತಿಯಲ್ಲಿ ಅತ್ಯಂತ ಮಹತ್ವದ ಸಂಶೋಧನೆಯಾಗಿದೆ. ಸೋಂಕಿತರಿಂದ ಗಂಟಲು ದ್ರವ ಮತ್ತಿತರೆ ಸ್ಯಾಂಪಲ್ ಗಳನ್ನು ಪಡೆದು ಟಿಸ್ಟಿಂಗ್ ಲ್ಯಾಬಿಗೆ ಕಳಿಸುವ ಪ್ರಕ್ರಿಯೆಯಲ್ಲಿ ಈ ಉಪಕರಣ ಅತ್ಯಗತ್ಯವಾಗಿ ಬೇಕಿತ್ತು. ಏಕೆಂದರೆ, ಇದು ಜೀವಂತ ವೈರಸ್ ಅನ್ನು ಸಾಗಿಸುತ್ತದೆ. ಜೀವಂತ ವೈರಸ್ ಅನ್ನು ಒಂದು ಕಡೆಯಿಂದ ಇನ್ನೊಂದಡೆಗೆ ಸಾಗಿಸುವುದು ಅತ್ಯಂತ ಸವಾಲಿನದ್ದು, ಅಪಾಯಕಾರಿ ಕೂಡ. ಈ ಉಪಕರಣವನ್ನು ವಿದೇಶಗಳಿಂದ ದುಬಾರಿ ಬೆಲೆ ತೆತ್ತು ಆಮದು ಮಾಡಿಕೊಳ್ಳಬೇಕಾಗಿತ್ತು.

5.ಕೋವ್-ಆಸ್ತ್ರ
ಈ ಸಂಶೋಧನೆ ಬಹಳ ವಿಶೇಷವಾಗಿದೆ. ಇದುವರೆಗೂ ನಾವು ಗಂಟಲು ದ್ರವ ಮತ್ತಿತರ ಮಾದರಿಗಳನ್ನು ಪಡೆದು ಕೋವಿಡ್ ಪತ್ತೆ ಮಾಡುತ್ತಿದ್ದೆವು. ಈಗ ಕೋವ್-ಅಸ್ತ್ರದ ಮೂಲಕ ಕೇವಲ ರೋಗಿಯ ಎದೆಯ ಭಾಗದ ಎಕ್ಸ್ ರೇ ತೆಗೆದು ವೈರಸ್ ಇದೆಯೇ ಇಲ್ಲವೇ ಎಂಬುದನ್ನು ಪತ್ತೆ ಮಾಡಬಹುದಾಗಿದೆ.
ಸುಮಾರು 4 ರಿಂದ 5 ಸಾವಿರ ರೂಪಾಯಿ ವೆಚ್ಚವನ್ನು ಕಡಿಮೆ ಮಾಡಿ ಕೇವಲ 150ರಿಂದ 200 ರೂಪಾಯಿ ಎಕ್ಸ್ ರೇ ಯಿಂದ ಸೋಂಕನ್ನು ಪತ್ತೆ ಮಾಡಬಹುದು. ಇದಕ್ಕಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತದೆ. ಈ ಮೂಲಕ ವ್ಯಕ್ತಿಗೆ ಕೋವಿಡ್ ಪಾಸಿಟೀವ್ ಇದೆಯೇ ಇಲ್ಲವೇ ಎಂಬುದನ್ನು ಸುಲಭ, ಸರಳವಾಗಿ ತಿಳಿಯಬಹುದು. ಇದನ್ನು ಅಯಿಂದ್ರ ಕಂಪನಿಯ ಆದರ್ಶ್ ನಟರಾಜನ್ ಅವರು ಸಂಶೋಧಿಸಿ ಅಭಿವೃದ್ಧಿಪಡಿಸಿದ್ದಾರೆ.

6. ಆಂಟಿ ಮೈಕ್ರೋಬಿಯಲ್ ಫೇಸ್ ವಾಶ್
ಮುಖದ ಮೇಲೆ ಕೂರುವ ಕೋವಿಡ್ ವೈರಸ್ ಜತೆಗೆ ಬೇರೆ ಯಾವುದೇ ವೈರಾಣುವನ್ನು ಸೆಕೆಂಡುಗಳಲ್ಲಿ ನಾಶ ಮಾಡುವ ಫೇಸ್ ವಾಶ್ ಇದಾಗಿದೆ. ಇದನ್ನು ಗಿಡಮೂಲಿಕೆಗಳಿಂದ ತಯಾರಿಸಲಾಗಿದೆ. ಕೋವಿಡ್ ನಂತಹ ಸೂಕ್ಷ್ಮ ಸಂದರ್ಭಗಳಲ್ಲಿ ಇದು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದನ್ನು ಆಟ್ರಿಮ್ಡ್ ಕಂಪನಿಯ ಡಾ. ಲತಾ ಡ್ಯಾಮಲ್ ಸಂಶೋಧಿಸಿ ಅಭಿವೃದ್ಧಿಪಡಿಸಿದ್ದಾರೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This