ಬೆಂಗಳೂರು : ಕೊರೊನಾ ಆತಂಕದ ಮಧ್ಯೆಯೂ ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಕೊರೊನಾ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆಯಲ್ಲಿ ನೆರೆ ಹಾಗೂ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಗೆ ನಿಲುವಳಿ ಮಂಡನೆ ವೇಳೆ ಮಾತನಾಡಿದ ಡಿಕೆಶಿವಕುಮಾರ್, ಕೊರೊನಾವನ್ನು ನೀವು ನಾವು ನಿರೀಕ್ಷೆ ಮಾಡಿರಲಿಲ್ಲ.
ಇದನ್ನ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಗವಂತನ ಆಟ ಎಂದಿದ್ದಾರೆ. ಈ ದೇಶದ ಪ್ರಧಾನಿ ಮಂತ್ರಿಗಳು ಕೇವಲ ನಾಲ್ಕು ಗಂಟೆಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ್ರು.
ದೀಪ ಹಚ್ಚೋಕೆ ಚಪ್ಪಾಳೆ ತಟ್ಟೋಕೆ ನಾಲ್ಕು ದಿನ ಸಮಯಕೊಟ್ಟರು. ಇದನ್ನ ನಾವು ಬಹಳ ಸಂತೋಷದಿಂದ ಸ್ವೀಕಾರ ಮಾಡಿದ್ವಿ. ರಾಜ್ಯದ ಎಲ್ಲ ವಿರೋಧ ಪಕ್ಷದವರೂ ಸರ್ಕಾರಕ್ಕೆ ಬೆಂಬಲ ಕೊಟ್ವಿ.
ಪ್ರಧಾನಿಗಳು 21 ದಿನಗಳಲ್ಲಿ ಕೊರೊನಾ ಯುದ್ಧವನ್ನ ಗೆಲ್ತೀವಿ ಎಂದು ಭಾಷಣ ಮಾಡಿದ್ರು. ಕೊರೊನಾ ವಿರುದ್ಧ ಹೋರಾಡೋಕೆ ನಾವು ಕೂಡ ಕೈ ಜೋಡಿಸಿದ್ವಿ.
ಆದ್ರೆ ಫುಡ್ ಕಿಟ್ ವಿತರಣೆಯಲ್ಲಿ ಕಿಟ್ ಮೇಲೆ ಬಿಜೆಪಿ ನಾಯಕರ ಫೋಟೋ ಹಾಕಿದ್ದಾರೆ. ಶಾಸಕ ಅರವಿಂದ ಲಿಂಬಾವಳಿ ಅವರು ಪ್ರಧಾನಿಗಳು, ಸಿಎಂ ಹಾಗೂ ತನ್ನ ಫೋಟೋ ಹಾಕಿ ಹಂಚಿದ್ದಾರೆ.
ಬಡವರು, ಬಾಣಂತಿಯರಿಗೆ ಕೊಡುವ ಆಹಾರದ ಕಿಟ್ ಅದು. ಅಲ್ಲದೇ ಫುಡ್ ಕಿಟ್ ಅವ್ಯವಹಾರದ ಬಗ್ಗೆಯೂ ಸರ್ಕಾರಕ್ಕೆ ಗಮನಕ್ಕೆ ತಂದ್ದಿದ್ದೇವೆ. ಆದರೆ ತಪ್ಪಿತಸ್ಥರ ವಿರುದ್ಧ ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ.
ಅದರ ಬಗ್ಗೆ ಒಂದು ತನಿಖೆ ಮಾಡಿಸಿಲ್ಲ. ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳೋಕೆ ಆಗ್ಲಿಲ್ಲ ಅಂದ್ರೆ ಇದೊಂದು ಸರ್ಕಾರನಾ ಎಂದು ಗುಡುಗಿದರು.
ಮುಂದುವರಿದು ಮಾತನಾಡಿದ ಅವರು, ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾದ ರೈತರಿಗೆ ನೆರವು ಸರ್ಕಾರ ಕೊಟ್ಟಿಲ್ಲ. ರೈತರಿಗೆ ಪರಿಹಾರ ಘೋಷಣೆ ಮಾಡಿದ್ರಿ, ಎಷ್ಟು ಜನರಿಗೆ ಎಷ್ಟು ರೂಪಾಯಿ ಪರಿಹಾರ ಕೊಟ್ಟಿದ್ದೀರಿ ಎಂದು ಪ್ರಶ್ನಸಿ ಲೆಕ್ಕ ಕೊಡಿ ಎಂದು ಆಗ್ರಹಿಸಿದರು.








