Chikkamagaluru | ನೀರಿಗಾಗಿ 60 ಅಡಿ ಬಾವಿ ತೋಡಿದ ದಂಪತಿ!
ಸ್ಥಳೀಯರಿಂದ ಅವಮಾನಕ್ಕೆ ಒಳಗಾದ ದಂಪತಿಯೊಂದು 55 ದಿನದಲ್ಲಿ 60 ಅಡಿ ಬಾವಿ ತೋಡಿರುವ ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅಣಜೂರಿನಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಅಣಜೂರಿನ ಈ ದಂಪತಿ ಹೆಸರು ರಾಜು-ಶಾರದಾ.
ಇವರು 30*40 ಸೈಟಿನಲ್ಲಿ ಗುಡಿಸಲು ಹಾಕಿಕೊಂಡು ಬದುಕುತ್ತಿದ್ದಾರೆ. ಪ್ರತಿ ದಿನ ಬೆಳ್ಳಂ ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿದ್ದ ಈ ದಂಪತಿ, ಸಂಜೆ ಮನೆಗೆ ವಾಪಸ್ ಆಗುತ್ತಿದ್ದಂತೆ ನೀರಿಗಾಗಿ ಪರದಾಡುತ್ತಿತ್ತು. ಅಕ್ಕಪಕ್ಕದಲ್ಲಿದ್ದ ಜನರನ್ನ ನೀರು ಕೇಳಿದ್ರೆ ಜಗಳಕ್ಕೆ ಬರುತ್ತಿದ್ದರಂತೆ. ನೀರಿನ ವಿಚಾರಕ್ಕೆ ಅನೇಕ ಬಾರಿ ಗಲಾಟೆಯೂ ಆಗಿದೆಯಂತೆ. ಯಾರನ್ನ ನೀರು ಕೇಳಿದ್ರೂ ಅವಮಾನ ಮಾಡುತ್ತಿದ್ದರಂತೆ.
ಇದರಿಂದ ಮನನೊಂದು ಗಟ್ಟಿ ಮನಸ್ಸು ಮಾಡಿದ ದಂಪತಿ, ನೀರಿಗಾಗಿ ಬಾವಿಯನ್ನೇ ತೋಡಲು ನಿರ್ಧಾರಿಸಿದ್ದಾರೆ. ಅದರಂತೆ ಸಂಕ್ರಾಂತಿಯಂದು ಅಯ್ಯಪ್ಪನ ನಾಮ ಸ್ಮರಣೆ ಮಾಡಿ ಭೂಮಿಗೆ ಮೊದಲ ಹಾರೆ – ಪಿಕಾಸಿ ಹಾಕಿದ್ದಾರೆ.
ಹಗಲಿನಲ್ಲಿ ಕೂಲಿ ಕೆಲಸಕ್ಕೆ ಹೋಗಿ ಬೆಳಗ್ಗೆ 2 ಗಂಟೆ, ಸಂಜೆ 2 ಗಂಟೆ ದಿನಕ್ಕೆ ನಾಲ್ಕೇ ಗಂಟೆ ಕೆಲಸ ಮಾಡಿ ಬಾವಿ ತೋಡಿದ್ದಾರೆ. 30*40 ಸೈಟಿನಲ್ಲಿ ದಂಪತಿಗಳಿಬ್ಬರು ಸೇರಿ 5 ಅಡಿ ಅಗಲ, 60 ಅಡಿ ಆಳದ ಬಾವಿಯನ್ನೇ ತೋಡಿದ್ದಾರೆ. ಬಾವಿಯಲ್ಲಿ ನೀರು ಜಿನುಗುತ್ತಿದ್ದು, ಇನ್ನೈದು ಅಡಿ ತೆಗೆದರೆ ಸಮೃದ್ಧ ಜಲ ಉಕ್ಕಲಿದೆ.
ಅಂದಹಾಗೆ ಆರಂಭದಲ್ಲಿ ಇವರ ಸಾಹಸವನ್ನು ಕಂಡು ಹುಚ್ಚರು ಎಂದು ನಕ್ಕವರೇ ಈಗ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.