ಹೊಸದಿಲ್ಲಿ, ಜೂನ್ 9: ಬ್ಯಾಂಕ್ ಗಳಿಗೆ ಹಣ ವಂಚಿಸಿದ ಆರೋಪ ಎದುರಿಸುತ್ತಿರುವ ನೀರವ್ ಮೋದಿಗೆ ಸಂಬಂಧಿಸಿದ ಎಲ್ಲಾ ಆಸ್ತಿಗಳನ್ನು ಜಪ್ತಿ ಮಾಡುವಂತೆ ಕೋರ್ಟ್ ಪಿಎಂಎಲ್ಎ ಕೋರ್ಟ್ ಆದೇಶ ಹೊರಡಿಸಿದೆ.
ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸುಮಾರು 13 ಸಾವಿರ ಕೋಟಿ ರೂಪಾಯಿ ಹಣ ನೀಡದೇ ಪಲಾಯನ ಮಾಡಿರುವ ಆರೋಪ ಎದುರಿಸುತ್ತಿದ್ದು, ಅವರಿಗೆ ಸಂಬಂಧಿಸಿದ ಎಲ್ಲಾ ಆಸ್ತಿಯನ್ನು ಜಪ್ತಿ ಮಾಡಲು ಕೋರ್ಟ್ ಆದೇಶಿಸಿದೆ.
ಪಿಎಂಎಲ್ಎ ಕೋರ್ಟ್ 2019 ರಿಂದ ನೀರವ್ ಮೋದಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದು, ದೇಶದ ವಿವಿಧ ಭಾಗದಲ್ಲಿರುವ ಅವರ ಬರೋಬ್ಬರಿ 1400 ಕೋಟಿ ಮೌಲ್ಯದ ಆಸ್ತಿಯನ್ನು ಸೀಜ್ ಮಾಡುವಂತೆ ಆದೇಶಿಸಿದೆ.
ಇಂದು ಅವರ ಆಸ್ತಿಯನ್ನು ಸೀಜ್ ಮಾಡುವಂತೆ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಪಿಎಂಎಲ್ಎ ಕೋರ್ಟ್ ಆಸ್ತಿಯನ್ನು ಮುಟ್ಟುಗೋಲು ಮಾಡುವ ಮೊದಲು ಕಾನೂನು ಸಲಹೆಯನ್ನು ಪಡೆಯಬೇಕು ಎಂದಿದೆ. ಅಷ್ಟೇ ಅಲ್ಲ ಅದಕ್ಕಾಗಿ 30 ದಿನಗಳ ಕಾಲಾವಕಾಶ ನೀಡಬೇಕಾಗಿ ಸೂಚಿಸಿದೆ.
ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬರೋಬ್ಬರಿ 13570 ಕೋಟಿ ವಂಚಿಸಿರುವ ಆರೋಪದ ಹಿನ್ನಲೆಯಲ್ಲಿ 2019 ಮಾರ್ಚ್ 20 ರಂದು ಲಂಡನ್ನಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಪ್ರಸ್ತುತ ಲಂಡನ್ ನಲ್ಲಿ ಇರುವ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತಂತೆ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಅಲ್ಲಿನ ನ್ಯಾಯಾಲಯದಲ್ಲಿ ನಡೆಯುತ್ತಿದೆ.