ಬೆಂಗಳೂರು: ಡ್ರಗ್ಸ್ ದಂಧೆ ಕೇಸಲ್ಲಿ ಸಿಲುಕಿ ಸಿಸಿಬಿ ಪೊಲೀಸರಿಂದ ಅರೆಸ್ಟ್ ಆಗಿರುವ ನಟಿ ರಾಗಿಣಿ ಸದ್ಯ ಬಿಡುಗಡೆಯ ಭಾಗ್ಯ ಸಿಗುವ ಸಾಧ್ಯತೆಗಳು ತೀರಾ ಕಡಿಮೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ನಟಿ ರಾಗಿಣಿ ಕಳೆದ ಮೂರು ದಿನಗಳಿಂದ ಸಿಸಿಬಿ ಕಸ್ಟಡಿಯಲ್ಲಿದ್ದಾಳೆ. ಮೂರು ದಿನವೂ ಅನಾರೋಗ್ಯದ ನೆಪಹೇಳಿ ಸಿಸಿಬಿ ಪೊಲೀಸರ ವಿಚಾರಣೆಗೆ ಅಸಹಕಾರ ನೀಡುತ್ತಿದ್ದ ರಾಗಿಣಿ, ಇಂದು ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ಕೋರ್ಟ್ ರಾಗಿಣಿಯನ್ನು ಮತ್ತೆ 5 ದಿನ ಕಸ್ಟಡಿಗೆ ನೀಡಿರುವುದು ಆಘಾತ ಉಂಟುಮಾಡಿದೆ. ಹೀಗಾಗಿ ಸಾಂತ್ವನ ಕೇಂದ್ರದಲ್ಲಿರುವ ರಾಗಿಣಿ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.
ರಾಗಿಣಿ ವಿರುದ್ಧ ದಾಖಲಾಗಿರುವ ಪ್ರಕರಣಗಳು ಸದ್ಯಕ್ಕೆ ಜಾಮೀನು ಸಿಗುವಂತಹವು ಅಲ್ಲ. ಆದರೂ ರಾಗಿಣಿ ತನಿಖೆಗೆ ಅಸಹಕಾರ ನೀಡಿ ಸಿಸಿಬಿ ಕಸ್ಟಡಿಯಿಂದ ಹೊರಬಹುದು ಎಂದು ಭಾವಿಸಿರಬಹುದು ಎನ್ನಲಾಗಿದೆ. ಆದರೆ, ಮತ್ತೆ ಕೋರ್ಟ್ 5 ದಿನ ಸಿಸಿಬಿ ಕಸ್ಟಡಿಗೆ ನೀಡಿರುವುದು ಆಕೆಯನ್ನು ಆಘಾತಗೊಳಿದೆ ಎನ್ನಲಾಗಿದೆ.
ಕೋರ್ಟ್ ತೀರ್ಪಿನ ನಂತರ ವಿಚಾರಣೆಗೆಂದು ಸಿಸಿಬಿ ಮಹಿಳಾ ಅಧಿಕಾರಿಗಳು ಬಂದಾಗ ರಾಗಿಣಿ ಮೌನವಾಗಿ ಕುಳಿತಿದ್ದಳಂತೆ. ಸಿಸಿಬಿ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡದೆ ಮೌನಕ್ಕೆ ಶರಣಾಗಿದ್ದಳು ಎಂದು ಸಿಸಿಬಿ ಮೂಲಗಳು ತಿಳಿಸಿವೆ.