ಅಗತ್ಯವಿದ್ದರೆ ದಸರಾ ಆನೆಗಳಿಗೆ ಕೋವಿಡ್ -19 ಪರೀಕ್ಷೆ
ಮೈಸೂರು, ಸೆಪ್ಟೆಂಬರ್14: ಅಗತ್ಯವಿದ್ದರೆ ದಸರಾ ಆನೆಗಳಿಗೆ ಕೋವಿಡ್ -19 ಪರೀಕ್ಷೆಗಳನ್ನು ನಡೆಸಲು ಮೈಸೂರು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಆನೆಗಳನ್ನು ಅಗತ್ಯವಿದ್ದರೆ ಮಾತ್ರ ಕೋವಿಡ್ -19 ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಮೈಸೂರು ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಎಂ ಜಿ ಅಲೆಕ್ಸಾಂಡರ್ ಹೇಳಿದರು.
ನ್ಯೂಯಾರ್ಕ್ ನಲ್ಲಿ, ಅಧಿಕಾರಿಗಳು ಹುಲಿಗೆ ಕೋವಿಡ್ -19 ಪರೀಕ್ಷೆ ನಡೆಸಿದಾಗ ಅದಕ್ಕೆ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಹುಲಿಯನ್ನು ಪರೀಕ್ಷಿಸಿದ ರೀತಿಯಲ್ಲಿ ಆನೆಗಳನ್ನು ಸಹ ಪರೀಕ್ಷೆಗೆ ಒಳಪಡಿಸಬಹುದು ಎಂದು ಅವರು ಹೇಳಿದರು.
ಸ್ವ್ಯಾಬ್ ಪರೀಕ್ಷೆಯನ್ನು ನಡೆಸಲಾಗುವುದು ಮತ್ತು ಅದಕ್ಕಾಗಿ ಆನೆಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗುವುದು ಎಂದು ದಸರಾ ಆನೆಗಳ ಉಸ್ತುವಾರಿ ಸಹ ಪಶುವೈದ್ಯ ಡಾ.ನಾಗರಾಜು ಹೇಳಿದರು. ಅವರ ಪ್ರಕಾರ, ಪರೀಕ್ಷೆಯ ಕಾರ್ಯವಿಧಾನವು ಮಾನವರ ಪರೀಕ್ಷಾ ವಿಧಾನವನ್ನು ಹೋಲುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳು ಮೈಸೂರಿನಲ್ಲಿ ದಸರಾ ಆಚರಣೆಗೆ ಐದು ಆನೆಗಳನ್ನು ಗುರುತಿಸಿದ್ದಾರೆ ಮತ್ತು ಅನುಮೋದನೆಗಾಗಿ ಪಟ್ಟಿಯನ್ನು ಮುಖ್ಯ ವನ್ಯಜೀವಿ ವಾರ್ಡನ್‌ಗೆ ಕಳುಹಿಸಿದ್ದಾರೆ.
ಅಭಿಮನ್ಯು, ವಿಕ್ರಮ, ವಿಜಯ, ಗೋಪಿ ಮತ್ತು ಕಾವೇರಿ ಎಂಬ ಆನೆಗಳನ್ನು ಗುರುತಿಸಿ ಆಚರಣೆಗೆ ಆಯ್ಕೆ ಮಾಡಲಾಗಿದೆ ಎಂದು ಅಲೆಕ್ಸಾಂಡರ್ ಹೇಳಿದ್ದಾರೆ.
ಹಲವಾರು ವರ್ಷಗಳಿಂದ ಅಂಬಾರಿಯನ್ನು ಹೊತ್ತೊಯ್ಯುತ್ತಿದ್ದ ಅರ್ಜುನ, 60 ವರ್ಷಕ್ಕಿಂತ ಮೇಲ್ಪಟ್ಟವನಾಗಿದ್ದರಿಂದ ಅವನನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, 60 ವರ್ಷಕ್ಕಿಂತ ಹೆಚ್ಚಿನ ಪ್ರಾಯದ ಆನೆಯನ್ನು ಅಂಬಾರಿ ಹೊರಲು ಬಳಸುವಂತಿಲ್ಲ.