ಈ ವರ್ಷಾಂತ್ಯದಲ್ಲಿ ಸಿದ್ಧವಾಗಲಿದೆ ಕೊರೊನಾ ಮಾತ್ರೆಗಳು..!
ಅಮೆರಿಕ : ವಿಶ್ವಾದ್ಯಂತ ಕೊರೊನಾ 2ನೇ ಅಲೆ ಜೋರಾಗಿದೆ. ಭಾರತದಲ್ಲಿ 2ನೇ ಅಲೆಯ ಪರಿಣಾಮ ಭೀಕರವಾಗಿದೆ. ಮತ್ತೊಂದೆಡೆ ಇಡೀ ವಿಶ್ವಾದ್ಯಂತ ಲಸಿಕೆಗಳನ್ನ ಜನರಿಗೆ ನೀಡಲಾಗ್ತಿದೆ. ಭಾರತದಲ್ಲಿಯೂ ಲಸಿಕೆ ನೀಡುವ ಅಭಿಯಾನ ಜಾರಿಯಲ್ಲಿದೆ. ಈ ನಡುವೆ ಕೊರೊನಾಗೆ ಮಾತ್ರೆಗಳ ಅಭಿವೃದ್ಧಿಯಲ್ಲಿ ಅಮೆರಿಕ ಮೂಲದ ಔಷಧ ಕಂಪನಿ ಫೈಜರ್ ತೊಡಗಿಕೊಂಡಿದೆ. ಹೌದು ಮೂಲಗಳ ಪ್ರಕಾರ ಈ ವರ್ಷದ ಕೊನೆಗೆ ಕೊರೊನಾ ಸೋಂಕಿಗೆ ಮಾತ್ರೆಗಳು ಲಭ್ಯವಾಗಲಿವೆ ಎಂದು ಫೈಜರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲ್ವರ್ಟ್ ಬೌರ್ಲಾ ತಿಳಿಸಿದ್ದಾರೆ.
ಜರ್ಮನ್ ಔಷಧ ತಯಾರಿಕಾ ಸಂಸ್ಥೆ ಬಯೋ ಎನ್ಟೆಕ್ ಜೊತೆಗೂಡಿ ಅಮೆರಿಕದ ಫೈಜರ್ ಮೊದಲ ಅಧೀಕೃತ ಕೊರೊನಾ ಲಸಿಕೆ ಅಭಿವೃದ್ಧಿಪಡಿಸಿತ್ತು. ಮಾರ್ಚ್ನಲ್ಲಿ ಸೋಂಕು ನಿರೋಧಕ ಲಸಿಕೆಯ ಆರಂಭಿಕ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಿತ್ತು. ಇದೀಗ ಮಾತ್ರೆಗಳ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದೆ. ಈ ಔಷಧವು ಮಾನವ ಜೀವಕೋಶಗಳಲ್ಲಿ ಕೊರೊನಾ ವೈರಸ್ ದ್ವಿಗುಣಗೊಳಿಸುವ ಕಿಣ್ವವನ್ನು ಪ್ರತಿಬಂಧಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ. ಈ ಔಷಧದಲ್ಲಿ ಪ್ರೊಟೀನ್ ಇನ್ಹಿಬಿಟರ್ಗಳಿದ್ದು, ಏಡ್ಸ್, ಹೆಪಟೈಟಿಸ್ ಸಿ ಚಿಕಿತ್ಸೆಗೂ ಇದನ್ನು ಬಳಸಲಾಗುತ್ತದೆ. ಈ ಔಷಧದ ವೈದ್ಯಕೀಯ ಪ್ರಯೋಗಗಳು ಸಂಪೂರ್ಣಗೊಂಡು ಅಮೆರಿಕ ಆಹಾರ ಮತ್ತು ಔಷಧೀಯ ಸಂಸ್ಥೆಯು ಅನುಮೋದನೆ ನೀಡಿದರೆ ಅಮೆರಿಕದಲ್ಲಿ ಈ ವರ್ಷಾಂತ್ಯಕ್ಕೆ ಔಷಧ ಲಭ್ಯವಾಗಲಿದೆ ಎಂದು ಬೌರ್ಲಾ ತಿಳಿಸಿದ್ದಾರೆ.