ಸಿಪಿಎಲ್ 2020- ಗಯಾನ ಅಮೇಝಾನ್ ವಾರಿಯರ್ಸ್‍ಗೆ ಆಘಾತ ನೀಡಿದ ಸೇಂಟ್ ಲೂಸಿಯಾ ಝೌಕ್ಸ್
2020ರ ಕೆರೆಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹತ್ತನೇ ಪಂದ್ಯದಲ್ಲಿ ಸೇಂಟ್ ಲೂಸಿಯಾ ಝೌಕ್ಸ್ ತಂಡ 10 ರನ್‍ಗಳಿಂದ ಗಯಾನ ಅಮೇಝಾನ್ ವಾರಿಯರ್ಸ್ ತಂಡದ ವಿರುದ್ಧ ರೋಚಕ ಜಯ ದಾಖಲಿಸಿದೆ. ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನು ಆಡಿರುವ ಸೇಂಟ್ ಲೂಸಿಯಾ ತಂಡ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯದಲ್ಲಿ ಸೋಲು ಅನುಭವಿಸಿದೆ. ಸದ್ಯ ಅಂಕ ಪಟ್ಟಿಯಲ್ಲಿ ಆರು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಟ್ರಿನಿಡಾಡ್ ನ ಬ್ರಿಯಾನ್ ಲಾರಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸೇಂಟ್ ಲೂಸಿಯಾ ಝೌಕ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದ್ರೆ ಗಯಾನ ಅಮೇಝಾನ್ ತಂಡದ ಬಿಗಿಯಾದ ಬೌಲಿಂಗ್ ದಾಳಿಯ ಮುಂದೆ ಸೇಂಟ್ ಲೂಸಿಯಾ ಬ್ಯಾಟ್ಸ್ ಮೆನ್ ಗಳು ಅಬ್ಬರ ರನ್ ಗಳಿಸಲು ವಿಫಲರಾದ್ರು. ಆರಂಭಿಕರಾದ ಕಿಮಾನಿ ಮೆಲಿಸ್ 8 ರನ್ ಹಾಗೂ ಮೊದಲ ಕ್ರಮಾಂದಲ್ಲಿ ಬ್ಯಾಟಿಂಗ್ ಮಾಡಿದ್ದ ಮಾರ್ಕ್ ಡೆಯಾಲ್ 2 ರನ್‍ಗೆ ಸುಸ್ತಾಗಿಬಿಟ್ರು.
ಹಾಗೇ ಆರಂಭಿಕ ಫ್ಲೇಚರ್ 12 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದ್ರು. ನಂತರ ರೋಸ್ಟನ್ ಚೇಸ್ ಏಕಾಂಗಿಯಾಗಿ ಹೋರಾಟ ನಡೆಸಿದ್ರು. ಉಳಿದಂತೆ ಸೇಂಟ್ ಲೂಸಿಯಾ ತಂಡದ ಮಧ್ಯಮ ಕ್ರಮಾಂಕದಲ್ಲಿ ಮಹಮ್ಮದ್ ನಭೀ 27 ರನ್ ಹಾಗೂ ಜಾವೆಲಿ ಗ್ಲೇನ್ 19 ರನ್ ಗಳಿಸಿ ರೋಸ್ಟನ್ ಚೇಸ್‍ಗೆ ಸಾಥ್ ನೀಡಿದ್ರು. ಅಂತಿಮವಾಗಿ ರೋಸ್ಟನ್ ಚೇಸ್ ಅಮೋಘ 60 ರನ್ ಸಿಡಿಸಿದ್ರು. ಪರಿಣಾಮ ಸೇಂಟ್ ಲೂಸಿಯಾ ಝೌಕ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 144 ರನ್ ದಾಖಲಿಸಿತ್ತು. ಗಯಾನ ತಂಡದ ಪರ ಇಮ್ರಾನ್ ತಾಹೀರ್ ಮೂರು ವಿಕೆಟ್ ಪಡೆದ್ರೆ, ಸ್ಮಿತ್ ಎರಡು ವಿಕೆಟ್ ಉರುಳಿಸಿದ್ರು.
ಸಾಧಾರಣ ಮೊತ್ತದ ಸವಾಲನ್ನು ಬೆನ್ನಟ್ಟಿದ್ದ ಗಯಾನ ಅಮೇಝಾನ್ ವಾರಿಯರ್ಸ್ ತಂಡ ಆರಂಭದಿಂದಲೇ ಆಘಾತ ಅನುಭವಿಸಿತ್ತು. ಆರಂಭಿಕ ಕಿಂಗ್ 1 ರನ್ ಗಳಿಸಿದ್ರೆ, ಹೇಮ್ ರಾಜ್ 15 ರನ್, ಹೆಟ್ಮೇರ್ 4 ರನ್, ರೋಸ್ ಟೇಲರ್ 1 ರನ್‍ಗೆ ತೃಪ್ತಿಪಟ್ಟುಕೊಂಡ್ರು. ಬಳಿಕ ನಿಕೊಲಾಸ್ ಪೂರನ್ 49 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ನ ಸಹಾಯದಿಂದ ಅಬ್ಬರದ 68 ರನ್ ದಾಖಲಿಸಿದ್ರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಗಯಾನ ಅಮೇಝಾನ್ ವಾರಿಯರ್ಸ್ ತಂಡ ಎಂಟು ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿ 10 ರನ್ ಗಳಿಂದ ಸೋಲೊಪ್ಪಿಕೊಂಡಿತ್ತು. ರೋಸ್ಟನ್ ಚೇಸ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.