ಕೊರೊನಾ ಸೋಂಕಿತ ತಾಯಿಯನ್ನ ನಡುರಸ್ತೆಯಲ್ಲೇ ಬಿಟ್ಟು ಎಸ್ಕೇಪ್ ಆದ ಮಗ… ಅಮ್ಮನ ಸ್ಥಿತಿ ನೋಡಿಯೂ ಮರುಗದ ಮಗಳು..!
ಉತ್ತರಪ್ರದೇಶ : ದೇಶಾದ್ಯಂತ ಕೊರೊನಾ ಹಾವಳಿ ನಡುವೆ ಅದೆಷ್ಟೋ ಜನ ತಮ್ಮ ಆಪ್ತರು ಸ್ನೇಹಿತರನ್ನ ಕಳೆದುಕೊಂಡು ಗೋಳಾಡುತ್ತಿದ್ದಾರೆ. ಆದ್ರೆ ಉತ್ತರಪ್ರದೇಶದಲ್ಲಿ ಓರ್ವ ಮಗ ತನ್ನ ಹೆತ್ತಮ್ಮನಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ತಿಳಿದ ತಕ್ಷಣ ಆಕೆಯನ್ನ ನಡುರಸ್ತೆಯಲ್ಲಿ ಬಿಬಿಟ್ಟು ಪರಾರಿಯಾಗಿರುವ ಘಟನೆ ನಡೆದಿತ್ತು. ಇದೀಗ ಆತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕೊರೊನಾ ಸೋಂಕಿತ ತಾಯಿಯನ್ನು ರಸ್ತೆ ಬದಿಯಲ್ಲೇ ಬಿಟ್ಟು ಪರಾರಿಯಾಗಿದ್ದ ಮಗನ ವಿರುದ್ಧ ಕಾನ್ಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ತಾಯಿ ಕೊರೊನಾ ಸೋಂಕಿತಳಾಗಿದ್ದರಿಂದ ತನಗೂ ಸೋಂಕು ತಗುಲಬಹುದೆಂದು ಭಯಗೊಂಡಿದ್ದ ಮಗ ವಿಶಾಲ್ ಎಂಬಾತ ಇಂತಹ ಹೇಯ ಕೃತ್ಯವೆಸಗಿದ್ದಾನೆ. ತಡ್ ಬಾಗಿಯಾ ಪ್ರದೇಶದಲ್ಲಿರುವ ತನ್ನ ಸೋದರಿ ಮನೆ ಬಳಿಯ ರಸ್ತೆಬದಿಗೆ ದಬ್ಬಿ ಹೊರಟುಹೋಗಿದ್ದ. ತಾಯಿ ರಸ್ತೆಬದಿಯಲೇ ಒದ್ದಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿತ್ತು.
ಮತ್ತೊಂದೆಡೆ ಸೋಂಕಿತೆಯ ಮಗಳು ಸಹ ಮಾನವೀಯತೆ ಮರೆತು ಸ್ವಂತ ತಾಯಿ ಮನೆಯ ಎದುರಿನ ರಸ್ತೆಬದಿಯಲ್ಲೇ ನರಳುತ್ತಿದ್ದರೂ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರಾರಕರಿಸಿದ್ದಾಳೆ. ರಸ್ತೆಬದಿ ಬಿದ್ದಿದ್ದ ಮಹಿಳೆಯ ಸ್ಥಿತಿಯನ್ನು ಸ್ಥಳೀಯರು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು, ಮಗ ಹಾಗೂ ಮಗಳು ಇಬ್ಬರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ವೈರಲ್ಲಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಆಯಂಬುಲೆನ್ಸ್ ಕರೆಸಿ ಸೋಂಕಿತ ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ವೇಳೆ ತಾಯಿ ಮೃತಪಟ್ಟಿದ್ದಾಳೆ. ಪಾಪಿ ಪುತ್ರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.