ಜೈಲಿನಿಂದ ಬಂದವನೇ ಪ್ರಿಯತಮೆಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದ
ಚಿಕ್ಕಬಳ್ಳಾಪುರ: ಯುವಕನೊಬ್ಬ ಜೈಲಿನಿಂದ ಬಂದವನೇ ಸೀದಾ ಪ್ರಿತಮೆಯ ಮನೆಗೆ ನುಗ್ಗಿ ಆಕೆಗೆ ಚಾಕುವಿನಿಂದ ಇರಿದಿರುವ ಘಟನೆ ಚಿಕ್ಕಬಳ್ಲಾಪುರದ ಭಗತ್ ಸಿಂಗ್ ನಗರದಲ್ಲಿ ನಡೆದಿದೆ. ಆರೋಪಿ ಹೇಮಂತ್ ಎಂಬಾತ ತನ್ನ ಪ್ರಿಯತಮೆ ಸಂಗೀತಾ (22) ಎಂಬಾಕೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸಸಂಗೀತಾಗೆ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಚಿಂತಾಮಣಿ ಮೂಲದವಳಾದ ಸಂಗೀತಾ, ಬಾಡಿಗೆ ಮನೆಯಲ್ಲಿ ವಾಸವಾಗಿವಾಗಿದ್ದು, ತಡರಾತ್ರಿ ಹೊಂಚು ಹಾಕಿ ಮನೆಗೆ ನುಗ್ಗಿದ್ದ ಹೇಮಂತ್ ಸಂಗೀತಾ ಹೊಟ್ಟೆ, ಬೆನ್ನಿನ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ.
ಪ್ರಕರಣದ ಹಿನ್ನೆಲೆ

ಸಂತ್ರಸ್ತೆ ಸಂಗೀತಾ ಮೊದಲ ಮದುವೆ ಬಳಿಕ ಗಂಡನಿಂದ ಡೈವೋರ್ಸ್ ಪಡೆದು ತಂದೆ ತಾಯಿಯೊಂದಿಗೆ ನೆಲೆಸಿದ್ದಳು. ಈ ವೇಳೆ ಹೇಮಂತ್ ಜೊತೆ ಸಂಬಂಧ ಬೆಳೆಸಿದ್ದ ಸಂಗೀತಾ, 2 ವರ್ಷಗಳಿಂದ ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದರು. ಆದರೆ ಕಳೆದ 3-4 ತಿಂಗಳ ಹಿಂದೆ ಸಂಗೀತಾ ವರ್ತನೆಯಿಂದ ಆಕೆ ಮೇಲೆ ಅನುಮಾನಪಟ್ಟು, ಹೇಮಂತ್ ಜಗಳ ಮಾಡುತ್ತಿದ್ದ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಹೇಮಂತ್ ವಿರುದ್ಧ ಸಂಗೀತಾ ದೂರು ದಾಖಲಿಸಿದ್ದಳು. ಹೇಮಂತ್ ತನ್ನ ಸಹವಾಸಕ್ಕೆ ಬರಬಾರದು ಎಂದು ಸಂಗೀತಾ ಮುಚ್ಚಳಿಕೆ ಬರೆಸಿಕೊಂಡಿದ್ದಳು. ಇದರಿಂದ ಸಿಟ್ಟಿಗೆದ್ದ ಹೇಮಂತ್, ಸಂಗೀತಾ ತಂದೆಯ ಬೈಕ್ ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಪ್ರಕರಣ ಸಂಬಂಧ ಪೊಲೀಸರು ಹೇಮಂತ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. 4 ದಿನಗಳು ಜೈಲಿನಲ್ಲೇ ಇದ್ದು, ಬಳಿಕ ಹೊರ ಬಂದಿರುವ ಹೇಮಂತ್, ಸಂಗೀತಾ ಮನೆಗೆ ಹೋಗಿದ್ದಾನೆ. ಆದ್ರೆ ಮನೆಯಲ್ಲಿ ಬೇರೆ ಯುವಕನಿದ್ದದ್ದನ್ನ ಗಮನಿಸಿದ ಹೇಮಂತ್ ತೀವ್ರ ಆಕ್ರೋಶಗೊಂಡಿದ್ದಾನೆ. ಆದ್ರೆ ಮನೆಯವರು ಹೇಮಂತ್ ನನ್ನ ಥಳಿಸಿ ಮನೆಯಿಂದ ಆಚೆ ಹಾಕಿದ್ದಾರೆ. ಕೋಪಗೊಂಡಿದ್ದ ಹೇಮಂತ್ ಮಧ್ಯರಾತ್ರಿ ಮನೆಗೆ ನುಗ್ಗಿ ಸಂಗೀತಾಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ.








