ಮದುವೆಯಾಗು ಎಂದು ಮನೆಗೆ ನುಗ್ಗಿದ್ದ ಯುವತಿಯನ್ನ ಕೊಲೆಗೈದ ಪ್ರಿಯಕರ
ಹಾವೇರಿ : 21 ವರ್ಷದ ಯುವತಿಯೊಬ್ಬಳನ್ನ ಆಕೆಯ ಪ್ರಿಯಕರನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಾವೇರಿಯ ಕರ್ಜಗಿ ರಸ್ತೆಯ ಬಳಿ ನಡೆದಿದೆ. ಮೊರಾರ್ಜಿ ವಸತಿ ಶಾಲೆ ಸಮೀಪದ ರೇಷ್ಮೆ ಇಲಾಖೆಗೆ ಸೇರಿದ ಹಾಳುಬಿದ್ದ ಕಟ್ಟಡದ ಬಳಿ ಯುವತಿಯ ಶವ ಪತ್ತೆಯಾಗಿದ್ದು, ಘಟನೆ ನಡೆದ 24 ಗಂಟೆಗಳ ಒಳಗೇ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣದ ಹಿನ್ನೆಲೆ
ಕೌದಿಕಲ್ಲಾಪುರದ 21 ವರ್ಷದ ಯುವತಿಯನ್ನು ಯತ್ತಿನಹಳ್ಳಿ ಗ್ರಾಮದ ಕರಿಬಸಪ್ಪ ಎಂಬಾತ ಪರಿಚಯ ಮಾಡಿಕೊಂಡಿದ್ದು, ಆಕೆಯನ್ನ ಪ್ರೀತಿಸುವುದಾಗಿ ನಂಬಿಸಿ ಮದುವೆಯಾಗುವುದಾಗಿ ವಂಚಿಸಿದ್ದ.
ಇತ್ತ ಯುವತಿ ಏಕಾಏಕಿ ಕರಿಬಸಪ್ಪನ ಮನೆಗೆ ನುಗ್ಗಿ ತನ್ನನ್ನ ಮದುವೆಯಾಗುವಂತೆ ಪೀಡಿಸಿದ್ದಾಳೆ. ಮನೆಗೆ ನುಗ್ಗಿ ಹೀಗೆ ರಂಪಾಟ ಮಾಡಿದ್ದಕ್ಕೆ ಸಿಟ್ಟಿಗೆದ್ದ ಆರೋಪಿ ಯುವತಿಯನ್ನ ಬೈಕ್ ನಲ್ಲಿ ಕರೆದೊಯ್ದು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದು ಪರಾರಿಯಾಗಿದ್ದಾನೆ.
ಮೃತದೇಹದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಆರೋಪಿಯನ್ನ ಅರೆಸ್ಟ್ ಮಾಡಿ ವಿಚಾರಣೆಗೊಳಪಡಿಸಿದ್ಧಾರೆ. ಹಾವೇರಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.