ಪಾಕಿಸ್ತಾನದ ಸ್ವಾಟ್ ಪ್ರಾಂತ್ಯದ ಪೊಲೀಸ್ ಠಾಣೆಯಲ್ಲಿಯೇ ಸ್ಫೋಟ ಸಂಭವಿಸಿದ್ದು, 12 ಜನ ಪೊಲೀಸರು ಸಾವನ್ನಪ್ಪಿ, 40ಕ್ಕೂ ಅಧಿಕ ಜನರ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ.
ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಪೊಲೀಸ್ ಠಾಣೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಇನ್ನು ಪೊಲೀಸ್ ಠಾಣೆಯೊಳಗೆ ಎರಡು ಸ್ಫೋಟಗಳು ಸಂಭವಿಸಿದ್ದು ಇಡೀ ಕಟ್ಟಡ ನಾಶವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
CTD ಡಿಐಜಿ ಖಾಲಿದ್ ಸೊಹೈಲ್ ಮಾತನಾಡಿ, ಸ್ಫೋಟವು “ಆತ್ಮಾಹುತಿ ದಾಳಿಯಲ್ಲ” ಮತ್ತು ಠಾಣೆಯಲ್ಲಿ ಮದ್ದುಗುಂಡುಗಳು ಮತ್ತು ಮಾರ್ಟರ್ ಶೆಲ್‌ಗಳನ್ನು ಸಂಗ್ರಹಿಸಿಡುವ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆ. ಪೊಲೀಸ್ ಠಾಣೆ ಮೇಲೆ ಯಾವುದೇ ದಾಳಿ ಅಥವಾ ಗುಂಡಿನ ದಾಳಿ ನಡೆದಿಲ್ಲ ಎಂದು ಹೇಳಿದ್ದಾರೆ.
ಸ್ಫೋಟದ ಕುರಿತು ತನಿಖೆ ನಡೆಯುತ್ತಿದೆ. ಬಾಂಬ್ ನಿಷ್ಕ್ರಿಯ ದಳಗಳು ಸ್ಫೋಟದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿವೆ. ಕುಸಿದ ಕಟ್ಟಡ ಹಳೆಯದಾಗಿದ್ದು, ಹೆಚ್ಚಿನ ಕಚೇರಿಗಳು ಮತ್ತು ಸಿಬ್ಬಂದಿಗಳು ಹೊಸ ಕಟ್ಟಡದಲ್ಲಿದ್ದಾರೆ ಎಂದು ಸಿಟಿಡಿ ಡಿಐಜಿ ತಿಳಿಸಿದ್ದಾರೆ.