ಬೆಂಗಳೂರು: ಜನಕ್ಕೆ ಆನ್ ಲೈನ್ ಸುರಕ್ಷತೆ ಬಗ್ಗೆ ಎಷ್ಟು ಹೇಳಿದರೂ ಬುದ್ಧಿ ಬರುತ್ತಿಲ್ಲ. ಅದರಲ್ಲೂ ಪ್ರಜ್ಞಾವಂತರೇ ಆನ್ ಲೈನ್ ವಂಚನೆಗೆ ಒಳಗಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.
ಒಂದೇ ಒಂದು ಫೋನ್ ಕರೆಯಿಂದ ಬೆಂಗಳೂರಿನ ಟೆಕ್ಕಿ ದಂಪತಿ ಬರೋಬ್ಬರಿ 2,66,75,791 ರೂ. ಕಳೆದುಕೊಂಡಿರುವ ಘಟನೆಯೊಂದು ವರದಿಯಾಗಿದೆ. ಪೂರ್ವ ವಿಭಾಗ ಸಿ.ಇ.ಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೇಸ್ ದಾಖಲಿಸಿ ತನಿಖೆ ಮಾಡಿದಾಗ ಹಣದ ವರ್ಗಾವಣೆ ಜಾಲ ಪತ್ತೆಯಾಗಿದೆ.
ಇವರ ಹಣ ಸುಮಾರು ಐವತ್ತು ಅಕೌಂಟ್ ಗಳಿಗೆ ಹೋಗಿರುವುದು ಗೊತ್ತಾಗಿದೆ. ಈಗ ಪೊಲೀಸರು ಹಂತ ಹಂತವಾಗಿ ಒಟ್ಟು ಒಂದು ಕೋಟಿ ಐದು ಲಕ್ಷ ರೂ. ಹಣವನ್ನು ಫ್ರೀಜ್ ಮಾಡಿದ್ದು, ನಂತರ ನ್ಯಾಯಾಲಯದ ಅನುಮತಿ ಪಡೆದು ಮರಳಿ ನೀಡಿದ್ದಾರೆ.
ಕೋಟ್ಯಾಂತರ ರೂ ಕಳೆದುಕೊಂಡ ದಂಪತಿಗೆ ಮೊದಲಿಗೆ ಕರೆ ಮಾಡಿ ಯುಟ್ಯೂಬ್ನಲ್ಲಿ ವಿಡಿಯೋ ನೋಡಿ ಸಬ್ಸ್ಕ್ರೈಬ್ ಮಾಡಿದರೆ 50 ರೂ. ನೀಡುವುದಾಗಿ ಹೇಳಿದ್ದರು. ವಿಡಿಯೋ ಸಬ್ಸ್ಕ್ರೈಬ್ ಮಾಡಿದ್ದ ಟೆಕ್ಕಿ ದಂಪತಿಗೆ ಹಣ ನೀಡಲಾಗಿದೆ. ನಂತರ ಟೆಲಿಗ್ರಾಂ ಗ್ರೂಪ್ ಗೆ ಆ್ಯಡ್ ಮಾಡಿ ಹೂಡಿಕೆ ಮಾಡಿದರೆ ಡಬಲ್ ಹಣ ನೀಡುವುದಾಗಿ ಆಮಿಷ ಒಡ್ಡಿದ್ದಾರೆ.
ಎರಡ್ಮೂರು ಲಕ್ಷ ರೂ. ಹೂಡಿಕೆ ಮಾಡಿದ್ದವರಿಗೆ ಲಾಭಾಂಶ ನೀಡಿದ್ದಾರೆ. ನಂತರ ಹಂತಹಂತವಾಗಿ 2,66,75,791 ರೂ ದಂಪತಿ ಹೂಡಿಕೆ ಮಾಡಿದ್ದಾರೆ. ಹಣ ವಾಪಸ್ಸು ಪಡೆಯಲು ಮುಂದಾದಾಗ ಹಣ ಮರಳಿ ಸಿಕ್ಕಿಲ್ಲ. ಪ್ರಶ್ನೆ ಮಾಡಿದಾಗ ಮತ್ತೆ 50 ಲಕ್ಷ ರೂ. ಹೂಡಿಕೆ ಮಾಡಲು ಸೂಚಿಸಲಾಗಿದೆ. ಇದರಿಂದ ಭಯಭೀತರಾದ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಉತ್ತರ ಭಾರತದ ಹಲವಾರು ಅಕೌಂಟ್ಗಳನ್ನು ಬಳಕೆ ಮಾಡಿದ್ದಾರೆ. ಶೇರ್ ಮಾರ್ಕೆಟ್ ಬ್ರೋಕರೇಜ್ ರೀತಿಯ ನಕಲಿ ವೆಬ್ಸೈಟ್ ರಚಿಸಿ ಈ ರೀತಿ ವಂಚಿಸಿದ್ದಾರೆ ಎನ್ನಲಾಗಿದೆ.