ಆಗಸ್ಟ್ 16ರಿಂದ 20ರವರೆಗೆ ಸಿಎಸ್ಕೆ ತಂಡಕ್ಕೆ ಚೆನ್ನೈ ನಲ್ಲಿ ತರಬೇತಿ ಶಿಬಿರ…?
2020ರ ಯುಎಇ ಐಪಿಎಲ್ ಟೂರ್ನಿಗೆ ತಂಡಗಳು ಪೂರ್ವ ತಯಾರಿ ನಡೆಸುತ್ತಿವೆ. ಬಹುತೇಕ ತಂಡಗಳು ಆಗಸ್ಟ್ 20ರ ನಂತರ ಯುಎಇಗೆ ಪ್ರಯಾಣ ಬೆಳೆಸಲಿವೆ. ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ಐಪಿಎಲ್ ಟೂರ್ನಿ ನಡೆಯಲಿದೆ.
ಈಗಾಗಲೇ ಕೊರೋನಾ ವೈರಸ್ ಸೊಂಕು ಮತ್ತು ಲಾಕ್ ಡೌನ್ ನಿಂದಾಗಿ ಐದಾರು ತಿಂಗಳಿಂದ ಕ್ರಿಕೆಟ್ ಆಟಗಾರರು ಮೈದಾನಕ್ಕೆ ಇಳಿದಿಲ್ಲ. ಮನೆಯಲ್ಲೇ ಜಿಮ್ ಮತ್ತು ವ್ಯಾಯಾಮ ಮಾಡಿಕೊಂಡು ತಮ್ಮ ಫಿಟ್ನೆಸ್ ಅನ್ನು ಕಾಯ್ದುಕೊಳ್ಳುತ್ತಿದ್ದರು. ಇದೀಗ ಐಪಿಎಲ್ ಗೆ ಮುಹೂರ್ತ ಫಿಕ್ಸ್ ಆಗಿರುವುದರಿಂದ ಎಲ್ಲಾ ಆಟಗಾರರು ಸನ್ನದ್ದರಾಗುತ್ತಿದ್ದಾರೆ. ಫ್ರಾಂಚೈಸಿಗಳು ತಮ್ಮ ತಂಡದ ತಯಾರಿಗಳನ್ನು ಮಾಡಿಕೊಳ್ಳುತ್ತಿವೆ.
ಇದಕ್ಕೆ ಪೂರಕವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಗಸ್ಟ್ 16ರಿಂದ 20ರವರೆಗೆ ಚೆನ್ನೈನಲ್ಲಿ ಶಿಬಿರ ನಡೆಸುವ ಪ್ಲಾನ್ ಮಾಡಿಕೊಂಡಿದೆ. ಈಗಾಗಲೇ ತಮಿಳುನಾಡು ಸರ್ಕಾರಕ್ಕೆ ಸಿಎಸ್ಕೆ ಪತ್ರ ಬರೆದಿದೆ. ತಮಿಳುನಾಡು ಸರ್ಕಾರದ ಉತ್ತರಕ್ಕೆ ಕಾಯುತ್ತಿದೆ. ಹಾಗೇ ಆಗಸ್ಟ್ 21ಕ್ಕೆ ಸಿಎಸ್ಕೆ ಯುಎಇಗೆ ಪ್ರಯಾಣ ಬೆಳೆಸಲಿದೆ.
ಆಗಸ್ಟ್ 16ರಿಂದ 20ರವರೆಗೆ ಸಿಎಸ್ಕೆ ತಂಡಕ್ಕೆ ತರಬೇತಿ ಶಿಬಿರ ನಡೆಸುವ ಯೋಚನೆಯಲ್ಲಿದ್ದೇವೆ. ಈ ಬಗ್ಗೆ ತಮಿಳುನಾಡು ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದೇವೆ. ಸರ್ಕಾರದ ಉತ್ತರಕ್ಕಾಗಿ ಕಾಯುತ್ತಿದ್ದೆವೆ ಎಂದು ಸಿಎಸ್ಕೆ ತಂಡದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾಸಿ ವಿಶ್ವನಾಥನ್ ಹೇಳಿದ್ದಾರೆ.
ತರಬೇತಿ ಶಿಬಿರಕ್ಕೆ ಮುನ್ನ ಆಟಗಾರರನ್ನು ಅವರ ಊರಿನಲ್ಲೇ ಕೋವಿಡ್ -ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆ ನಂತರ ಚೆನ್ನೈನಲ್ಲಿ ಎರಡು ಬಾರಿ ಟೆಸ್ಟ್ ಮಾಡಲಾಗುತ್ತದೆ. ಆಗಸ್ಟ್ 17 ಮತ್ತು ಆಗಸ್ಟ್ 18ರಂದು ಪರೀಕ್ಷೆ ನಡೆಸಲಾಗುತ್ತದೆ ಎಂದು ಅವರು ಹೇಳಿದ್ರು.
ಈಗಾಗಲೇ ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ರಾಂಚಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಕಳೆದ ಫೆಬ್ರವರಿ -ಮಾರ್ಚ್ ನಲ್ಲಿ ಸಿಎಸ್ಕೆ ಕ್ಯಾಂಪ್ ನಲ್ಲಿದ್ದ ಧೋನಿ ಆನಂತರ ಲಾಕ್ ಡೌನ್ ಟೈಮ್ನಲ್ಲಿ ಮನೆಯಲ್ಲೇ ಲಾಕ್ ಆಗಿದ್ದರು. ರಾಂಚಿಯ ತಮ್ಮ ಫಾರ್ಮ್ ಹೌಸ್ ನಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಮತ್ತೆ ಮೈದಾನಕ್ಕೆ ಆಗಮಿಸಿದ್ದಾರೆ. ಈ ನಡುವೆ ಸುರೇಶ್ ರೈನಾ ಕೂಡ ನೆಟ್ಸ್ ಅಭ್ಯಾಸ ಶುರು ಮಾಡಿದ್ದರು.