ಕಳೆದ ಮೂರು ಪಂದ್ಯಗಳಿಂದ ಆತ್ಮವಿಶ್ವಾಸ ಕಳೆದುಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಇಂದು ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ತವರಿನಲ್ಲಿ ಎದುರಿಸಲಿದೆ. ಇಂದು ಚೆನ್ನೈ ಬೌಲಿಂಗ್ ವರ್ಸಸ್ ಮುಂಬೈ ಬ್ಯಾಟಿಂಗ್ ಆಗಿದೆ.
ಇಲ್ಲಿನ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ನಾಲ್ಕು ಬಾರಿ ಚಾಂಪಿಯನ್ ಚೆನ್ನೈ ಮುಂಬೈ ಎದುರು ಅಗ್ನಿ ಪರೀಕ್ಷೆ ಎದುರಿಸಲಿದೆ. ಚೆಪಾಕ್ ಮೈದಾನದಲ್ಲಿ ಒಳ್ಳೆಯ ದಾಖಲೆ ಹೊಂದಿರುವ ಮುಂಬೈ ಇಲ್ಲಿ ಆಡಿರುವ ಈ ಹಿಂದಿನ ಪಂದ್ಯಗಳನ್ನು ಗೆದ್ದುಕೊಂಡಿದೆ. 2019ರಲ್ಲಿ ಧೋನಿ ನೇತೃಥ್ವದ ಚೆನ್ನೈ ತಂಡ ಮುಂಬೈ ವಿರುದ್ಧ ಆಡಿದ್ದ 2 ಪಂದ್ಯಗಳನ್ನು ಗೆದ್ದುಕೊಂಡಿತ್ತು.ನಾಲ್ಕು ವರ್ಷಗಳ ಬಳಿಕ ಚೆಪಾಕ್ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ.
ಚೆನ್ನೈ ಪರ ಡೆವೊನ್ ಕಾನ್ವೆ (414ರನ್) ಮತ್ತು ಋತುರಾಜ್ ಗಾಯಕ್ವಾಡ್ (354 ರನ್) ಒಳ್ಳೆಯ ಆರಂಭ ನೀಡಿದ್ದಾರೆ. ಅಜಿಂಕ್ಯ ರಹಾನೆ ಒತ್ತಡವನ್ನು ನಿಭಾಯಿಸಿದ್ದಾರೆ. ಅಂಬಾಟಿ ರಾಯ್ಡು ಮತ್ತು ಮೊಯಿನ್ ಅಲಿ ಸ್ಪೋಟಕ ಬ್ಯಾಟಿಂಗ್ ಮಾಡಬೇಕಿದೆ.
ವೇಗಿ ದೀಪಕ್ ಚಾಹರ್ ಮರಳಿದ್ದು ಬೌಲಿಂಗ್ ವಿಭಾಗ ಸುಧಾರಿಸಿದೆ. ಮತ್ತೋರ್ವ ವೇಗಿ ತುಷಾರ್ ದೇಶಪಾಂಡೆ 17 ವಿಕೆಟ್ ಪಡೆದಿದ್ದಾರೆ. ಮಥೀಶಾ ಪಾಥಿರಾನಾ ತಂಡಕ್ಕೆ ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ರವೀಂದ್ರ ಜಡೇಜಾ, ಮಹೀಶ್ ತೀಕ್ಷ್ಣ, ಮೊಯಿನ್ ಅಲಿ ಸ್ಪಿನ್ ಜಾದೂ ಮಾಡಬೇಕಿದೆ.
ಇನ್ನು ಮುಂಬೈ ತಂಡ ಆರಂಭದಲ್ಲಿ ಎಡವಿದರೂ ಇದೀಗ ದೊಡ್ಡ ಮೊತ್ತವನ್ನು ಕಲೆ ಹಾಕಿ ತನ್ನ ತಾಕತ್ತನ್ನು ಪ್ರದರ್ಶೀಸಿದೆ. ಆದರೆ ಬೌಲರ್ಗಳು ದುಬಾರಿಯಾಗುತ್ತಿದ್ದಾರೆ. ಸ್ಪಿನ್ನರ್ ಪಿಯೂಶ್ ಚಾವ್ಲಾ ದೊಡ್ಡ ಪಾತ್ರ ನಿರ್ವಹಿಸುತ್ತಿದ್ದಾರೆ. ಇಶಾನ್ ಕೀಶನ್ ಮತ್ತೆ ಲಯಕ್ಕೆ ಮರಳಿದ್ದು ಮುಂಬೈ ಬ್ಯಾಟಿಂಗ್ಗೆ ಆನೆ ಬಲ ಬಂದಿದೆ. ಸೂರ್ಯ ಕುಮಾರ್ ಸೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸುತ್ತಿದ್ದಾರೆ. ನಾಯಕ ರೋಹಿತ್ ಹೊರತುಪಡಿಸಿ, ಕ್ಯಾಮರೊನ ಗ್ರೀನ್ ಮತ್ತು ತಿಲಕ್ ವರ್ಮಾ ಎದುರು ಚೆನ್ನೈ ಬೌಲರ್ಗಳು ಕಠಿಣ ಸವಾಲು ಎದುರಿಸಲಿದ್ದಾರೆ.