ಸಂವಿಧಾನದ ಬಗ್ಗೆ ಚರ್ಚೆ ನಡೆಸುವ ಮೂಲಕ ಕರ್ನಾಟಕ ವಿಧಾನಸಭೆ ಇಡಿ ದೇಶದ ಗಮನ ಸೆಳೆದಿದೆ. ಸೋಮವಾರ ನಡೆದ ಸಂವಿಧಾನ ಕುರಿತು ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡ ಸಚಿವ ಸಿ.ಟಿ.ರವಿ ಲೆಫ್ಟ್ ನಲ್ಲಿ ನಿಂತು ಕಾಂಗ್ರೆಸ್ ಗೆ ಚಾಟಿ ಬೀಸಿ ರೈಟ್ ಪರ್ಸನ್ ಎಂಬಂತೆ ಕಂಡು ಬಂದರು.
ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ ರವಿ ಸದನದಲ್ಲಿ ಕಾಂಗ್ರೆಸ್ಗೆ ಚಾಟಿ ಬೀಸಿದರು. ಅರ್ಧ ಗಂಟೆಗೂ ಹೆಚ್ಚು ಮಾತನಾಡಿದ ಅವರು, ಮುಸ್ಲಿಂ ಲೀಗ್ ಸ್ಥಾಪನೆ, 1965ರಲ್ಲಿ ಗಾಂಧಿ ಹತ್ಯೆ ಪ್ರಕರಣವನ್ನು ತನಿಖೆ ಮಾಡಿದ ಕಪೂರ್ ಆಯೋಗ, ತುರ್ತು ಪರಿಸ್ಥಿತಿ ಸಮಯದಲ್ಲಿ ಹೋರಾಟಗಾರ ಬಂಧನ, 253 ಪತ್ರಕರ್ತರ,ಮತ್ತು 52 ಜನ ವಿದೇಶಿ ಪತ್ರಕರ್ತರನ್ನು ಬಂಧಿಸಿದ್ದು, ಸೇರಿದಂತೆ ಅನೇಕ ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸಿದರು. ತಮ್ಮ ಪ್ರಸ್ತಾಪದಲ್ಲಿ ಕಾಂಗ್ರೆಸ್ ಮಾಡಿರುವ ಲೋಪಗಳನ್ನು ಗುರುತಿಸಲು ಸಚಿವ ಸಿ.ಟಿ ರವಿ ಮುಂದಾದರು. ಇದೇ ವೇಳೆ ಅವರು ಅಂಬೇಡ್ಕರ್ ವಿಚಾರವನ್ನು ಪ್ರಸ್ತಾಪಿಸಿದಾಗ, ಕಾಂಗ್ರೆಸ್ ಪಕ್ಷದ ಶಾಸಕರು ಸಚಿವರ ಮೇಲೆ ಮುಗಿ ಬಿದ್ದರು.
ಅಂಬೇಡ್ಕರ್ ಅವರು ಬೌದ್ಧ ಧರ್ಮ ಯಾಕೆ ಸೇರಿದ್ರು ಎಂದು ಹೇಳಲು ಸಿ.ಟಿ ರವಿ ಮುಂದಾಗಿದ್ದರು. ಈ ವೇಳೆಯಲ್ಲಿ, ಅಂಬೇಡ್ಕರ್ ಅವರು “ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುವುದಿಲ್ಲ” ಎಂದು ಹೇಳಿದ ಮಾತನ್ನು ಸಿ.ಟಿ. ಪ್ರಸ್ತಾಪ ಮಾಡಿ , ಅಂಬೇಡ್ಕರ್ ಯಾಕೆ ಮಾತು ಹೇಳಿದರು ಎಂದು ವಿಶ್ಲೇಷಣೆ ಮಾಡಲು ಮುಂದಾದರು. ಆ ಕಾಲದಲ್ಲಿ ಜಾತಿ ವ್ಯವಸ್ಥೆ ತುಂಬ ಇತ್ತು. ಇದರಿಂದ ಬೇಸತ್ತು ಅಂಬೇಡ್ಕರ್ ಈ ಮಾತನ್ನು ಹೇಳಿದರು. ಅದಕ್ಕಾಗಿ ಅವರು ಬೌದ್ಧಧರ್ಮ ಸ್ವೀಕಾರ ಮಾಡಿದರು. ಇದೆ ಸಮಯದಲ್ಲಿ ಅಂಬೇಡ್ಕರ್ ಅವರಿಗೆ ಕ್ರಿಶ್ಚಿಯನ್ ಮಿಷನರಿಗಳು,ಮುಸ್ಲಿಂ ಮೌಲ್ವಿಗಳು ನಮ್ಮ ಧರ್ಮಕ್ಕೆ ಬನ್ನಿ ಎಂದು ಎಲ್ಲಾ ರೀತಿಯಾ ಆಸೆ, ಆಮಿಷಗಳನ್ನು ತೋರಿಸುತ್ತಾರೆ. ಆಗ ಅಂಬೇಡ್ಕರ್ ಹೇಳಿದ್ರು ” ನಾನು ಪ್ರತಿಭಟನಾ ಮಾರ್ಗವಾಗಿ ನಾನು ಹಿಂದೂ ಧರ್ಮವನ್ನು ತೊರಿಯುತ್ತಿದ್ದೇನೆ, ನನ್ನ ಸಂಸ್ಕೃತಿ ಅಲ್ಲ ” ಎಂದಿದ್ದರು. ಈ ವಿಚಾರ ಸಚಿವ ಸಿ.ಟಿ ರವಿ ಪ್ರಸ್ತಾಪ ಮಾಡಿದ ತಕ್ಷಣ ಕಾಂಗ್ರೆಸ್ ಶಾಸಕರು ವಿರೋಧ ವ್ಯಕ್ತಪಡಿಸಿದರು.
ಸಚಿವ ಸಿ.ಟಿ ರವಿ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದ ಮಾಜಿ ಸಚಿವ ಕೆ.ಜೆ ಜಾರ್ಜ್ ಅಂಬೇಡ್ಕರ್ ಅವರು ದೊಡ್ಡ ವ್ಯಕ್ತಿತ್ವ ಹೊಂದಿದ್ದರು. ಅಂತಹ ದೊಡ್ಡ ವ್ಯಕ್ತಿತ್ವ ಹೊಂದಿದ ಅಂಬೇಡ್ಕರ್ ಆಶೆ, ಆಮಿಷಗಳಿಗೆ ಒಳಗಾಗುತ್ತಾರಾ ? ಇದು ಅಂಬೇಡ್ಕರ್ ಅವರಿಗೆ ಮಾಡುತ್ತಿರುವ ಅಪಮಾನ ಎಂದು ವಿರೋಧ ವ್ಯಕ್ತಪಡಿಸಿದರು. ಕೆ.ಜೆ ಜಾರ್ಜ್ ಅವರ ಮಾತಿಗೆ ಕಾಂಗ್ರೆಸ್ ಶಾಸಕರು ಧ್ವನಿಗೂಡಿಸಿದರು.