ಬಾಸ್ ಡಿ ಲೀಡೆ(67) ಆಲ್ರೌಂಡ್ ಪ್ರದರ್ಶನ ಹಾಗೂ ವಿಕ್ರಮ್‌ಜಿತ್ ಸಿಂಗ್(52) ಅರ್ಧಶತಕದ ನಡುವೆ ಪಾಕಿಸ್ತಾನದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ನೆದರ್ಲೆಂಡ್ಸ್ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ 81 ರನ್‌ಗಳ ಸೋಲಿನ ಆಘಾತ ಕಂಡಿದೆ.
ಹೈದ್ರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 49 ಓವರ್‌ಗಳಲ್ಲಿ 286 ರನ್‌ಗಳಿಗೆ ಸರ್ವಪತನ ಕಂಡಿತು. ಈ ಟಾರ್ಗೆಟ್ ಬೆನ್ನತ್ತಿದ ನೆದರ್ಲೆಂಡ್ಸ್ 41 ಓವರ್‌ಗಳಿಗೆ 205 ರನ್‌ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಬಾಬರ್ ಆಜ಼ಂ ಸಾರಥ್ಯದ ಪಾಕಿಸ್ತಾನ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಗೆಲುವಿನ ಆರಂಭ ಕಂಡಿದೆ. ಅಲ್ಲದೇ ಇದು ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕೆ ಭಾರತದ ನೆಲದಲ್ಲಿ ದೊರೆತ ಮೊದಲ ಗೆಲುವಾಗಿದೆ.
ಟಾಪ್ ಆರ್ಡರ್ ವೈಫಲ್ಯ:
ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ಆರಂಭಿಕ ಆಘಾತ ಕಂಡಿತು. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಫಖರ್ ಜಮಾನ್(12) ಹಾಗೂ ಇಮಾಮ್-ಉಲ್-ಹಕ್(15) ರನ್‌ಗಳಿಸಿ ವಿಕೆಟ್ ಒಪ್ಪಿಸಿದರೆ. 1ನೇ ಕ್ರಮಾಂಕದಲ್ಲಿ ಬಂದ ನಾಯಕ ಬಾಬರ್ ಆಜ಼ಂ(5) ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದರು. ಪರಿಣಾಮ 38 ರನ್‌ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿತು.
ರಿಜ್ವಾನ್-ಶಕೀಲ್ ಆಸರೆ:
ಆದರೆ 4ನೇ ವಿಕೆಟ್‌ಗೆ ಜೊತೆಯಾದ ವಿಕೆಟ್-ಕೀಪರ್ ಮೊಹಮ್ಮದ್ ರಿಜ್ವಾನ್(68) ಹಾಗೂ ಸೌದ್ ಶಕೀಲ್(68) ತಂಡಕ್ಕೆ ಆಸರೆಯಾದರು. ಜವಾಬ್ದಾರಿಯ ಆಟವಾಡಿದ ಈ ಇಬ್ಬರು 4ನೇ ವಿಕೆಟ್‌ಗೆ 120 ರನ್‌ಗಳ ಜೊತೆಯಾಟದ ಮೂಲಕ ತಂಡದ ಮೊತ್ತವನ್ನ ಹೆಚ್ಚಿಸಿದರು. ಇದಾದ ಬಳಿಕ ಕೆಳಕ್ರಮಾಂಕದಲ್ಲಿ ಮೊಹಮ್ಮದ್ ನವಾಜ಼್(39) ಹಾಗೂ ಶದಾಬ್ ಖಾನ್(32) ಉಪಯುಕ್ತ ರನ್‌ಗಳಿಸಿದರು. ಆದರೆ ಅಂತಿಮವಾಗಿ ಪಾಕ್ ತಂಡ 49 ಓವರ್‌ಗಳಿಗೆ 286 ರನ್‌ಗಳಿಸಿ ಆಲೌಟ್ ಆಯಿತು. ನೆದರ್ಲೆಂಡ್ಸ್ ಪರ ಬಾಸ್ ಡಿ ಲೀಡೆ(4/62) ಆಕ್ರಮಣಕಾರಿ ಬೌಲಿಂಗ್‌ನಿಂದ ಮಿಂಚಿದರೆ. ಆಕ್ಮನ್ 2, ಆರ್ಯನ್ ದತ್, ವ್ಯಾನ್ ಬೆಕ್ ಹಾಗೂ ಮೆಕ್ರೇನ್ ತಲಾ 1 ವಿಕೆಟ್ ಪಡೆದರು.
ಪಾಕ್ ಸಂಘಟಿತ ದಾಳಿ:
ಪಾಕಿಸ್ತಾನ ನೀಡಿದ 287 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ನೆದರ್ಲೆಂಡ್ಸ್ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಪಾಕಿಸ್ತಾನದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ಪರಿಣಾಮ ಪ್ರಮುಖ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿದರು. ಆದರೆ ಆರಂಭಿಕ ಬ್ಯಾಟರ್ ವಿಕ್ರಮ್‌ಜಿತ್ ಸಿಂಗ್(52) ಹಾಗೂ ಆಲ್ರೌಂಡರ್ ಬಾಸ್ ಡಿಲೀಡೆ(67) ಅವರ ಜವಾಬ್ದಾರಿಯುತ ಆಟದ ನಡುವೆಯೂ ನೆದರ್ಲೆಂಡ್ಸ್ 205 ರನ್‌ಗಳಿಗೆ ಆಲೌಟ್ ಆಯಿತು. ಪಾಕ್ ಪರ ಹ್ಯಾರಿಸ್ ರಾಫ್(3/43) ಹಾಗೂ ಹಸನ್ ಅಲಿ(2/33) ಡಚ್ಚರ ಬ್ಯಾಟಿಂಗ್ ಬೆನ್ನೆಲುಬು ಮುರಿದರೆ. ಶಾಹೀನ್, ಇಫ್ತಿಕರ್, ನವಾಜ್ ಹಾಗೂ ಶದಾಬ್ ತಲಾ 1 ವಿಕೆಟ್ ಪಡೆದರು.