ಪ್ರಸಕ್ತ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿರುವ ಅಫ್ಘಾನಿಸ್ತಾನ ತಂಡ, ಮತ್ತೊಂದು ಹೈವೋಲ್ಟೇಜ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಸವಾಲು ಎದುರಿಸಲು ಸಜ್ಜಾಗಿದೆ.

ಇಂದಿನ ಮಹತ್ವದ ಪಂದ್ಯಕ್ಕಾಗಿ ಮುಂಬೈನ ಐತಿಹಾಸಿಕ ವಾಂಖೆಡೆ ಸ್ಟೇಡಿಯಂನಲ್ಲಿ ವೇದಿಕೆ ಸಜ್ಜಾಗಿದೆ. ಸೆಮೀಸ್ ರೇಸ್‌ನಲ್ಲಿರುವ ಎರಡು ತಂಡಗಳು ಇಂದಿನ ಪಂದ್ಯಕ್ಕಾಗಿ ಈಗಾಗಲೇ ಭರ್ಜರಿ ತಯಾರಿ ಸಹ ಮಾಡಿಕೊಂಡಿವೆ. ಈ ನಡುವೆ ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್, ಅಫ್ಘಾನಿಸ್ತಾನದ ಆಟಗಾರರನ್ನ ಭೇಟಿಯಾಗುವ ಮೂಲಕ ಅವರ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ. ವಾಂಖೆಡೆ ಸ್ಟೇಡಿಯಂನಲ್ಲಿ ಅಫ್ಘಾನ್ ಆಟಗಾರರನ್ನ ಭೇಟಿಯಾದ ಸಚಿನ್ ತೆಂಡುಲ್ಕರ್ ಪೆಪ್ ಟಾಕ್ ಸಹ ನಡೆಸಿದ್ದಾರೆ.

ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರೊಂದಿಗೆ ಅತ್ಯಂತ ಸಂತಸದ ಕ್ಷಣಗಳನ್ನ ಕಳೆದ ಅಫ್ಘಾನ್ ಆಟಗಾರರು, ಕ್ರಿಕೆಟ್‌ನ ಕುರಿತು ಸಾಕಷ್ಟು ಟಿಪ್ಸ್‌ಗಳನ್ನ ಕೂಡ ಪಡೆದರು. ಅಲ್ಲದೇ ಸಚಿನ್ ತೆಂಡುಲ್ಕರ್ ಅವರ ಭೇಟಿ ಅಫ್ಘಾನ್ ಆಟಗಾರರಿಗೆ ಸ್ಪೂರ್ತಿ ನೀಡುವ ಜೊತೆಗೆ ಅವರಲ್ಲಿನ ಆತ್ಮವಿಶ್ವಾಸವನ್ನ ಕೂಡ ಹೆಚ್ಚುವಂತೆ ಮಾಡಿದೆ. ಸಚಿನ್ ತೆಂಡುಲ್ಕರ್ ಅವರು ಅಫ್ಘಾನಿಸ್ತಾನದ ಆಟಗಾರರನ್ನ ಭೇಟಿಯಾದ ಫೋಟೋಗಳನ್ನ ಐಸಿಸಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
https://twitter.com/ACBofficials/status/1721542754801696871
ಸಚಿನ್ ತೆಂಡುಲ್ಕರ್ ಅವರನ್ನ ಭೇಟಿಯಾದ ಕುರಿತ ತಮ್ಮ ಅನಿಸಿಕೆ ಹಂಚಿಕೊಂಡಿರುವ ಅಫ್ಘಾನಿಸ್ತಾನ್ ತಂಡದ ನಾಯಕ ಹಶ್ಮತುಲ್ಲ ಶಹೀದಿ, “ನಾವು ಅವರ ಆಟವನ್ನ ನೋಡಿ ಬೆಳೆದಿದ್ದು, ಇದೀಗ ಅವರನ್ನ ಭೇಟಿಯಾಗಿರುವುದು ಕನಸು ನನಸಾದಂತಾಗಿದೆ” ಎಂದಿದ್ದಾರೆ.
CWC 2023, AUS v AFG, Afghanistan, Sachin Tendulkar, World Cup, ODI Cricket








