ಬೆಂಗಳೂರು: ದೇಶದಲ್ಲಿ ಪೆಟ್ರೋಲ್-ಡೀಸಲ್ ಬೆಲೆ ಏರಿಕೆ ಖಂಡಿಸಿ ಇಂದು ರಾಜ್ಯ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಇದು ಕಾನೂನು ಉಲ್ಲಂಘನೆ ಆಗಿದ್ದು, ಕಾಂಗ್ರೆಸ್ ನಾಯಕರ ವಿರುದ್ಧ ಕೇಸ್ ದಾಖಲಿಸುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು, ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರತಿಭಟನೆಗೆ ಅವಕಾಶ ನೀಡಿಲ್ಲ. ಹೀಗಿದ್ದರೂ ಪ್ರತಿಭಟನೆ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆ ಎಫ್‌ಐಆರ್ ದಾಖಲಾಗುವುದು ಖಚಿತ ಎಂದು ತಿಳಿಸಿದ್ದಾರೆ.
ಇದೇ ವಿಚಾರವಾಗಿ ನಗರ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಪ್ರತಿಕ್ರಿಯಿಸಿ, ಪ್ರತಿಭಟನೆ ಕೈಗೆತ್ತಿಕೊಂಡ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ ಐಆರ್ ದಾಖಲಿಸಲಾಗುತ್ತದೆ ಎಂದು ತಿಳಿಸಿದರು.
ಪ್ರತಿಭಟನೆಗೆ ಅನುಮತಿ ಇಲ್ಲ ಎಂದು ಹೈಗ್ರೌಂಡ್ಸ್ ಪೋಲಿಸರು ತಿಳಿಸಿದ್ದರೂ, ನಿಯಮವನ್ನು ಉಲ್ಲಂಘಿಸಿ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ ಎಂದು ರಾಥೋಡ್ ತಿಳಿಸಿದ್ದಾರೆ.