ಗಾಂಧಿನಗರ : ಬಿಪರ್ ಜಾಯ್ ಚಂಡಮಾರುತ (Biparjoy Cyclone)ದಿಂದಾಗಿ ಗುಜರಾತ್ ನಲ್ಲ ಸಾಕಷ್ಟು ಅವಾಂತರವೇ ಸೃಷ್ಟಿಯಾಗಿದೆ.
ಗುರುವಾರ ಮಧ್ಯರಾತ್ರಿ ನಂತರ ಸೈಕ್ಲೋನ್ ಕಛ್ ಬಳಿ ತೀರವನ್ನು ಪೂರ್ಣಪ್ರಮಾಣದಲ್ಲಿ ದಾಟಿದ್ದು, ಕ್ರಮೇಣ ದುರ್ಬಲಗೊಳ್ಳುತ್ತಿದೆ ಎನ್ನಲಾಗಿದೆ. ಚಂಡಮಾರುತ ಈಶಾನ್ಯ ದಿಕ್ಕಿನಲ್ಲಿ ಕರಾಚಿಯತ್ತ ತೆರಳುತ್ತಿದೆ. ಯಾವುದೇ ಕ್ಷಣದಲ್ಲಿ ಇದು ವಾಯುಭಾರ ಕುಸಿತವಾಗಿ ಬದಲಾಗಲಿದೆ ಎನ್ನಲಾಗಿದೆ. ಅದರ ಪ್ರಭಾವ ಹೆಚ್ಚಾಗಿದ್ದಾಗ ಬಿರುಗಾಳಿ ಸಹಿತ ಭಾರೀ ಮಳೆಯಾಗಿ ದೊಡ್ಡ ಮಟ್ಟದಲ್ಲಿ ಅನಾಹುತ ಸೃಷ್ಟಿಸಿದೆ. ಸಾವಿರಾರು ಮರಗಳು, ವಿದ್ಯುತ್ ಕಂಬಗಳು, ಮನೆಗಳು ಬಿದ್ದು ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ.
ರಾಜ್ಯದ ಬಹುತೇಕ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದಾಗಿದೆ. ಹಲವೆಡೆ ಪ್ರಭಾವ ಉಂಟಾಗಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಮನೆ, ಆಸ್ಪತ್ರೆ, ಕಟ್ಟಡಗಳಲ್ಲಿ ನೀರು ತುಂಬಿದೆ. ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ. ಭಾವ್‍ನಗರದ ಪ್ರವಾಹದಲ್ಲಿ ಸಿಲುಕಿದ್ದ ಮೇಕೆಗಳನ್ನು ಕಾಪಾಡಲು ಹೋದ ತಂದೆ ಮಗ ಸಾವನ್ನಪ್ಪಿದ್ದಾರೆ.








