ರಾಜ್ಯದ ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಡಿ. ಸುಧಾಕರ್ ಅವರು ತಮ್ಮ 66 ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ಎರಡು ತಿಂಗಳಿಂದ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗಿನ ಜಾವ ಕೊನೆಯುಸಿರೆಳೆದರು.
ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜಕೀಯ ನಾಯಕರು, ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ ದುಃಖದ ವಾತಾವರಣ ನಿರ್ಮಾಣವಾಯಿತು. ಹಲವರು ಆಸ್ಪತ್ರೆಗೆ ಹಾಗೂ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.
ಸೋಮವಾರ ಚಳ್ಳಕೆರೆಯ ಪಾವಗಡ ರಸ್ತೆಯಲ್ಲಿರುವ ಜೈನ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕುಟುಂಬದವರು, ರಾಜಕೀಯ ನಾಯಕರು, ಸಾವಿರಾರು ಅಭಿಮಾನಿಗಳು ಕಣ್ಣೀರಿನ ವಿದಾಯ ಹೇಳಿದರು. ಪುತ್ರ ಸುಹಾಸ್ ತಂದೆಯ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಿ ಅಂತಿಮ ವಿಧಿವಿಧಾನ ನೆರವೇರಿಸಿದರು.
ಅಂತ್ಯಸಂಸ್ಕಾರದ ವೇಳೆ ಪೊಲೀಸ್ ಪಡೆಗಳಿಂದ ಗನ್ ಸಲ್ಯೂಟ್ ನೀಡಲಾಗಿದ್ದು, ರಾಜ್ಯ ಸರ್ಕಾರದ ಪರವಾಗಿ ಗೌರವ ಸಲ್ಲಿಸಲಾಯಿತು.
ಅವರ ಅಗಲಿಕೆಯಿಂದ ಕರ್ನಾಟಕ ರಾಜಕೀಯ ಕ್ಷೇತ್ರದಲ್ಲಿ ತುಂಬಲಾರದ ಶೂನ್ಯ ಉಂಟಾಗಿದೆ.







