ವಿಶ್ವ ಸಿನಿರಂಗದಲ್ಲೇ ಸದ್ದು ಮಾಡಿದ್ದ RRR ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದ ರಾಮ್ ಚರಣ್ ಇದೀಗ ಮತ್ತೊಂದು ಭಾರಿ ನಿರೀಕ್ಷೆಯ ಸಿನಿಮಾದೊಂದಿಗೆ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ‘ಪೆದ್ದಿ’ ಚಿತ್ರದ ಟ್ರೇಲರ್ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.
ಚಿತ್ರತಂಡ ಹಂಚಿಕೊಂಡ ಹೊಸ ಪೋಸ್ಟರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಪೋಸ್ಟರ್ ಜೊತೆಗೆ, ಮೇ 18ರಂದು ಟ್ರೇಲರ್ ಅನಾವರಣ… ಜೂನ್ 3ರಂದು ಪ್ರಥಮ ಪ್ರದರ್ಶನ… ಜೂನ್ 4ರಂದು ವಿಶ್ವವ್ಯಾಪಿ ಬಿಡುಗಡೆ ಎಂದು ಘೋಷಿಸಲಾಗಿದೆ.
ಈ ಸಿನಿಮಾದ ವಿಶೇಷ ಆಕರ್ಷಣೆಯೆಂದರೆ ಕನ್ನಡದ ಹೆಮ್ಮೆಯ ನಟ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು. ರಾಮ್ ಚರಣ್ ಮತ್ತು ಶಿವರಾಜ್‌ಕುಮಾರ್ ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದು ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.
ಆ್ಯಕ್ಷನ್, ಎಮೋಷನ್ ಹಾಗೂ ಪವರ್‌ಫುಲ್ ಕಥಾಹಂದರ ಹೊಂದಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುವ ನಿರೀಕ್ಷೆಯಿದೆ. ಟ್ರೇಲರ್ ಬಿಡುಗಡೆಯ ನಂತರ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಾಗುವ ಸಾಧ್ಯತೆ ಇದೆ.







