ಬೆಳಗಾವಿ: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ (Darshan)ಗೆ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿರುವ ಸುದ್ದಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಹೀಗಾಗಿ ದರ್ಶನ್ ಆಂಡ್ ಗ್ಯಾಂಗ್ ನ್ನು ಬೇರೆ ಜೈಲಿಗೆ ಸ್ಥಳಾಂತರಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.
ಈಗ ದರ್ಶನ್ & ಗ್ಯಾಂಗ್ ಗೆ ಬೇರೆ ಜೈಲಿಗೆ ಶಿಫ್ಟ್ ಮಾಡಲು ಸಿಎಂ ಸೂಚನೆ ನೀಡಿದ್ದಾರೆ. ಹೀಗಾಗಿ ದರ್ಶನ್ ಮತ್ತು ಗ್ಯಾಂಗ್ ನ್ನು ನಟೋರಿಯಸ್ ಕೈದಿಗಳು ಇರುವ ಬೆಳಗಾವಿಯ (Belagavi) ಹಿಂಡಲಗಾ ಜೈಲಿಗೆ (Hindalaga Jail) ಶಿಫ್ಟ್ ಮಾಡಬಹುದು ಎನ್ನಲಾಗುತ್ತಿದೆ.
ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಜಾಲಿ ಲೈಫ್ ನಡೆಸುತ್ತಿದ್ದಾರೆ. ಈ ಫೋಟೋ ಮತ್ತು ವೀಡಿಯೋ ವೈರಲ್ ಆದ ನಂತರ ರಾಜ್ಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಪರಪ್ಪನ ಅಗ್ರಹಾರದ ಕರಾಳ ಮುಖ ಹೊರ ಬಂದಿದೆ. ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಪಶ್ಚಾತಾಪ ಪಡುತ್ತಿದ್ದಾರೆ ಎಂದು ಅಂದುಕೊಂಡಿದ್ದವರಿಗೆ ಈಗ ಶಾಕ್ ಎದುರಾಗಿದೆ. ಹೀಗಾಗಿ ಜನರೇ ಈಗ ಪೊಲೀಸ್ ವ್ಯವಸ್ಥೆಯ ಬಗ್ಗೆ ಬೇಸರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಜೈಲಿನಲ್ಲಿ ಐಷಾರಾಮಿಯಾಗಿ ಬದುಕುತ್ತಿದ್ದ ದರ್ಶನ್ ಹಾಗೂ ಗ್ಯಾಂಗ್ ಗೆ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿನ `ಅಂಧೇರಿ’ ಸೆಲ್‌ಗಳಿಗೆ ಈ ಗ್ಯಾಂಗ್ ಶಿಫ್ಟ್ ಆಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಗಲ್ಲಿಗೇರಿಸುವ ಏಕೈಕ ಜೈಲು ಅಂದರೆ ಬೆಳಗಾವಿ ಹಿಂಡಲಗಾ ಜೈಲು. ನಟೋರಿಯಸ್ ಕೈದಿಗಳನ್ನು ಇಡಲು 36 ಕತ್ತಲು ಕೋಣೆಯ ವ್ಯವಸ್ಥೆ ಬೆಳಗಾವಿ ಜೈಲಿನಲ್ಲಿದೆ. ಅದರಲ್ಲಿ 15 ಕೋಣೆಗಳು ಖಾಲಿ ಇವೆ. ಹೀಗಾಗಿ ಬೆಳಗಾವಿ ಹಿಂಡಲಗಾ ಜೈಲಿನ ಬಂದೋಬಸ್ತ್ ವ್ಯವಸ್ಥೆ ಕುರಿತು ಹಿರಿಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈಗಾಗಲೇ ಹಿಂಡಲಗಾ ಜೈಲಿನಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ, ದಂಡುಪಾಳ್ಯ ಗ್ಯಾಂಗ್, ವೀರಪ್ಪನ್ ಸಹಚರರು, ಸೈನೈಡ್ ಮಲ್ಲಿಕಾ, ಬಳ್ಳಾರಿ ನಾಗ, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ಹಲವರು ಸೆರೆವಾಸ ಅನುಭವಿಸಿದ್ದಾರೆ.
ಅಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿಗಳು ಕೂಡ ಸೆರೆವಾಸ ಅನುಭವಿಸುತ್ತಿದ್ದಾರೆ. ಸದ್ಯ ದರ್ಶನ್ ಆಂಡ್ ಗ್ಯಾಂಗ್ ಅಲ್ಲಿ ಹಾಕುವ ಕುರಿತು ಚಿಂತನೆ ನಡೆದಿದೆ. ದರ್ಶನ್ ಅಲ್ಲಿಯೇ ಉಳಿಯುತ್ತಾರಾ? ಅಥವಾ ಬೇರೆ ಜೈಲಿಗೆ ಶಿಫ್ಟ್ ಆಗ್ತಾರಾ ನೋಡಬೇಕಿದೆ.








