ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಪರವಾಗಿ ಅಭಿಮಾನಿಗಳು ದೊಡ್ಡ ಮಟ್ಟದ ಅಭಿಯಾನವನ್ನೇ ನಡೆಸುತ್ತಿದ್ದಾರೆ. ತಮಿಳುನಾಡಿನ ದಳಪತಿ ವಿಜಯ್ ಮಾದರಿಯಲ್ಲಿ ದರ್ಶನ್ ಕೂಡ ರಾಜಕೀಯಕ್ಕೆ ಬರಬೇಕು ಮತ್ತು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎನ್ನುವುದು ಅವರ ಫ್ಯಾನ್ಸ್ ಆಸೆ. ಆದರೆ ಈ ವಿಚಾರವನ್ನು ಮುಂದಿಟ್ಟುಕೊಂಡು ಪವಿತ್ರಾ ಗೌಡ ಅವರ ಪರ ವಕೀಲರಾದ ಬಾಲನ್ ಅವರು ನೀಡಿರುವ ಸಂದರ್ಶನ ಈಗ ಭಾರೀ ವೈರಲ್ ಆಗುತ್ತಿದೆ.
ಬಾಲನ್ ಅವರು ರಾಜಕೀಯ ವ್ಯವಸ್ಥೆ ಮತ್ತು ಉಚಿತ ಯೋಜನೆಗಳ ಬಗ್ಗೆ ಅತ್ಯಂತ ತೀಕ್ಷ್ಣವಾಗಿ ಮತ್ತು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ದರ್ಶನ್ ಸಿಎಂ ಆದರೆ ನಾನು ಡಿಸಿಎಂ ಆಗುತ್ತೇನೆ ಎಂದು ಹೇಳುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ. ಪ್ರಸ್ತುತ ರಾಜಕಾರಣಿಗಳು ಜನರನ್ನು ಹೇಗೆ ಮರುಳು ಮಾಡುತ್ತಿದ್ದಾರೆ ಎಂಬುದನ್ನು ವಿವರಿಸಲು ಅವರು ತಮಗೇ ಮುಖ್ಯಮಂತ್ರಿ ಸ್ಥಾನ ಸಿಕ್ಕರೆ ಏನೆಲ್ಲಾ ಮಾಡುತ್ತೇನೆ ಎಂದು ಲೇವಡಿ ಮಾಡಿದ್ದಾರೆ.
ನಾನು ಡಿಸಿಎಂ ಆದರೆ ಜನರಿಗೆ ಕೇವಲ ಬಸ್ ಪ್ರಯಾಣ ಮಾತ್ರವಲ್ಲದೆ ರೈಲು ಮತ್ತು ವಿಮಾನ ಪ್ರಯಾಣವನ್ನೂ ಸಂಪೂರ್ಣ ಉಚಿತವಾಗಿ ನೀಡುತ್ತೇನೆ. ಮಹಿಳೆಯರಿಗೆ ಎಂಟು ಗ್ರಾಂ ಚಿನ್ನ ಮತ್ತು ಮದುವೆಗೆ ಎರಡು ಲಕ್ಷ ರೂಪಾಯಿ ಹಣ ಕೊಡುತ್ತೇನೆ ಎಂದು ಬಾಲನ್ ಹೇಳಿದ್ದಾರೆ. ರೈಲಿನಿಂದ ಹಿಡಿದು ಜೈಲಿನವರೆಗೆ ಎಲ್ಲವನ್ನೂ ಫ್ರೀ ಮಾಡುತ್ತೇನೆ ಎಂದು ಹೇಳುವ ಮೂಲಕ ಇಂದಿನ ಫ್ರೀಬೀಸ್ ಸಂಸ್ಕೃತಿಯನ್ನು ಟೀಕಿಸಿದ್ದಾರೆ.
ಕೇವಲ ಸಾಮಾಜಿಕ ಭರವಸೆಗಳು ಮಾತ್ರವಲ್ಲದೆ ತಮ್ಮ ವೈಯಕ್ತಿಕ ಐಷಾರಾಮಿ ಜೀವನದ ಬಗ್ಗೆಯೂ ಅವರು ಹಾಸ್ಯ ಮಾಡಿದ್ದಾರೆ. ಸದ್ಯ ಸಾದಾ ಕಾರು ಹೊಂದಿರುವ ನನಗೆ ರೋಲ್ಸ್ ರಾಯ್ಸ್ ಕಾರು ಖರೀದಿಸುವ ಆಸೆ ಇದೆ. ಒಂದು ಕೋಟಿ ಬೆಲೆಯ ಮನೆಯ ಬದಲಿಗೆ 120 ಕೋಟಿ ರೂಪಾಯಿ ವೆಚ್ಚದ ಬಂಗಲೆ ಕಟ್ಟಿಸುವ ಹಂಬಲವಿದೆ. ಕ್ಯಾರಾವನ್ ಹತ್ತಿ ಭಾಷಣ ಮಾಡುವ ಆಸೆ ಇದೆ ಎಂದು ಬಾಲನ್ ವ್ಯಂಗ್ಯವಾಡಿದ್ದಾರೆ.
ಸದ್ಯ ಸುಪ್ರೀಂಕೋರ್ಟ್ ಆದೇಶದಂತೆ ದರ್ಶನ್ ಇನ್ನೂ ಒಂದು ವರ್ಷ ಜೈಲಿನಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಅವರ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈ ನಡುವೆ ಜ್ಯೋತಿಷಿಗಳು ದರ್ಶನ್ ರಾಜಕೀಯ ಪ್ರವೇಶದ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಲಾಯರ್ ಬಾಲನ್ ಅವರ ಈ ವಿಚಿತ್ರ ಆಫರ್ ಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ.





