ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭೂ ಹಗರಣದ ಕಿಡಿ ಮತ್ತೊಮ್ಮೆ ಸ್ಫೋಟಗೊಂಡಿದೆ. ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ರೈತರ ಸಾವಿರಾರು ಎಕರೆ ಜಮೀನು ಲೂಟಿಯಾಗುತ್ತಿದೆ ಎಂದು ಆರೋಪಿಸಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಸುಮಾರು 20 ಸಾವಿರ ಎಕರೆ ಭೂಮಿ ಯಾರ ಹೆಸರಿನಲ್ಲಿದೆ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿರುವ ಅವರು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
ಈಗ ನಾನು ನಗುತ್ತಿದ್ದೇನೆ, ವ್ಯವಸ್ಥೆ ಹದಗೆಟ್ಟಿದೆ
ಹಿಂದೆ ಸಭೆಗಳಲ್ಲಿ ನಾನು ಭಾವುಕನಾಗಿ ಅಳುತ್ತಿದ್ದಾಗ ವಿರೋಧಿಗಳು ವ್ಯಂಗ್ಯ ಮಾಡುತ್ತಿದ್ದರು. ಆದರೆ ಈಗಿನ ಭ್ರಷ್ಟ ವ್ಯವಸ್ಥೆ ಮತ್ತು ಲೂಟಿಯನ್ನು ಕಂಡು ನನಗೆ ನಗು ಬರುತ್ತಿದೆ ಎಂದು ದೇವೇಗೌಡರು ತಿರುಗೇಟು ನೀಡಿದ್ದಾರೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೈತರ ಭೂಮಿಯನ್ನು ಕಬಳಿಸುವ ದೊಡ್ಡ ದಂಧೆ ನಡೆಯುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಅವರಿಗೆ ದೇವೇಗೌಡರ ಸವಾಲು
ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಹಳೆಯ ಗೆಳೆಯ ಮತ್ತು ಸಹೋದ್ಯೋಗಿ. ಅವರ ಸಾಮಾಜಿಕ ನ್ಯಾಯದ ಬದ್ಧತೆ ನನಗೂ ತಿಳಿದಿದೆ. ಆದರೆ ಬೆಂಗಳೂರು ಉಸ್ತುವಾರಿ ಹೊತ್ತಿರುವವರ ಒತ್ತಡಕ್ಕೆ ಮಣಿದು ಬಡವರಿಗೆ ಅನ್ಯಾಯವಾಗುತ್ತಿರುವುದನ್ನು ತಡೆಯಲು ಅವರಿಗೆ ಸಾಧ್ಯವಾಗುತ್ತಿಲ್ಲವೇ ಎಂದು ಪ್ರಶ್ನಿಸಿದರು. ಧೈರ್ಯವಿದ್ದರೆ ಬಿಡದಿಗೆ ನನ್ನ ಜೊತೆ ಬನ್ನಿ, ಅಲ್ಲಿನ ಜನರ ಕಣ್ಣೀರು ಮತ್ತು ಸಮಸ್ಯೆಯನ್ನು ಒಟ್ಟಾಗಿ ನೋಡೋಣ ಎಂದು ಮುಖ್ಯಮಂತ್ರಿಗಳಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಇತಿಹಾಸ ನೆನಪಿಸಿದ ದೊಡ್ಡಗೌಡರು
ಹಿಂದೆ ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ವಾಹನ ದಟ್ಟಣೆ ಕಡಿಮೆ ಮಾಡಲು ಐದು ಟೌನ್‌ಶಿಪ್‌ಗಳನ್ನು ಘೋಷಿಸಿದ್ದರು. ಆಗ ಇದೇ ಕಾಂಗ್ರೆಸ್ ನಾಯಕರು ಸತ್ಯಶೋಧನಾ ಸಮಿತಿ ರಚಿಸಿ, ಕುಮಾರಸ್ವಾಮಿ ರೈತರ ಭೂಮಿ ನುಂಗುತ್ತಿದ್ದಾರೆ ಎಂದು ಜನರನ್ನು ಎತ್ತಿಕಟ್ಟಿದ್ದರು. ಜನರ ವಿರೋಧಕ್ಕೆ ಬೆಲೆ ಕೊಟ್ಟು ಕುಮಾರಸ್ವಾಮಿ ಅಂದು ಯೋಜನೆಯನ್ನು ಕೈಬಿಟ್ಟಿದ್ದರು. ಆದರೆ ಇಂದು ಅದೇ ಕಾಂಗ್ರೆಸ್ ಸರ್ಕಾರ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ಇದು ಅಭಿವೃದ್ಧಿಯಲ್ಲ, ಇದೊಂದು ದೊಡ್ಡ ದಂಧೆ
ಬಿಡದಿ ಭಾಗದಲ್ಲಿ ಹೈನುಗಾರಿಕೆ ನಂಬಿ ಬದುಕುತ್ತಿರುವ ಸಾವಿರಾರು ರೈತರು ಇಂದು ಕಣ್ಣೀರು ಹಾಕುತ್ತಿದ್ದಾರೆ. 20 ಸಾವಿರ ಎಕರೆ ಭೂಮಿ ಈಗಾಗಲೇ ಪ್ರಭಾವಿಗಳ ಪಾಲಾಗಿದೆ ಎಂಬ ಮಾಹಿತಿ ಇದೆ. ಕನಕಪುರದಲ್ಲೂ ಎಷ್ಟು ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಪಟ್ಟಿಯೂ ನನ್ನ ಬಳಿ ಇದೆ. ಬಿಡಿಎ ಅಕ್ರಮಗಳ ವಿರುದ್ಧವೂ ನಾನು ಹೋರಾಟ ಮಾಡುತ್ತೇನೆ. ನನ್ನ ಈ ಹೋರಾಟ ಇಂದಿನಿಂದ ಅಧಿಕೃತವಾಗಿ ಆರಂಭವಾಗಿದೆ ಎಂದು ದೇವೇಗೌಡರು ಗುಡುಗಿದ್ದಾರೆ.
ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಕೇಳಿಬಂದಿರುವ ಭೂ ಅಕ್ರಮದ ಆರೋಪ ಈಗ ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ದೇವೇಗೌಡರ ಈ ನೇರ ಸಮರ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.







