ಬೆಂಗಳೂರು: ರೇಣುಕಾಸ್ವಾಮಿ (Renukaswamy) ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ಗೆ (Darshan) ಇಂದು ಕೂಡ ಜಾಮೀನು ಸಿಕ್ಕಿಲ್ಲ. ದರ್ಶನ್ ಅಷ್ಟೇ ಅಲ್ಲದೇ, ಪವಿತ್ರಾಗೌಡ ಸೇರಿದಂತೆ ಪ್ರಕರಣದ ಇನ್ನಿತರ ಆರೋಪಿಗಳಿಗೆ ಕೂಡ ಜಾಮೀನು ಭಾಗ್ಯ ಸಿಕ್ಕಿಲ್ಲ. ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಬುಧವಾರಕ್ಕೆ ಮುಂದೂಡಿದೆ.
ಇಂದು ನಡೆದ ವಿಚಾರಣೆ ವೇಳೆ ಆಕ್ಷೇಪಣಾ ವಾದವನ್ನು ಎಸ್ ಪಿಪಿ ಪ್ರಸನ್ನಕುಮಾರ್ ಮಂಡಿಸಿದರು. ಪವಿತ್ರಗೌಡ, ದರ್ಶನ್ ಮತ್ತು ರವಿಶಂಕರ್ ಪಾತ್ರದ ಕುರಿತು ಅವರು ವಾದ ಮಂಡಿಸಿದರು. ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ಓದಿದ ಎಸ್ಪಿಪಿ, ಬಲ ಭಾಗದಲ್ಲಿ ರೇಣುಕಾಸ್ವಾಮಿ ಪಕ್ಕೆಲುಬು ಮುರಿದು ಶ್ವಾಸಕೋಶಕ್ಕೆ ಚುಚ್ಚಿದೆ. ಎಡಭಾಗದಲ್ಲಿ ಕೂಡ ಪಕ್ಕೆಲುಬುಗಳು ಮುರಿದಿವೆ. 17 ಬಲವಾದ ಪೆಟ್ಟುಗಳು ಶ್ವಾಸಕೋಶ, ಪಕ್ಕೆಲುಬುಗಳ ಬಳಿಯೇ ಬಿದ್ದಿದೆ. ಸಾವು ಸಂಭವಿಸುವ ಮುನ್ನ ಎಲ್ಲಾ ಪೆಟ್ಟುಗಳು ಬಿದ್ದಿವೆ ಎಂದಿದ್ದಾರೆ.
ಸೋಡಿಯಂ ಪರೀಕ್ಷೆ ನಡೆಸಲಾಗಿದೆ. 39 ಮಾರಣಾಂತಿಕ ಹಲ್ಲೆ ಆಗಿದೆ. ಮರಣೋತ್ತರ ಪರೀಕ್ಷೆಯನ್ನು ವಿಡಿಯೋಗ್ರಫಿ ಮಾಡಲಾಗಿದೆ. ಇದರಲ್ಲಿ ಕೂಡ ಯಾವುದೇ ಮರೆಮಾಚುವ ಕೆಲಸ ಆಗಿಲ್ಲ. 13 ಬಲವಾದ ಪೆಟ್ಟುಗಳನ್ನು ವೈದ್ಯರು ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಹಿಡಿದಿದ್ದಾರೆ. ಮರ್ಮಾಂಗದ ಮೇಲೂ ಕೂಡ ಭಯಂಕರವಾದ ಹಲ್ಲೆ ಮಾಡಿದ್ದಾರೆ. ಮರ್ಮಾಂಗದ ವೃಷಣ ಚೀಲದಲ್ಲೂ ರಕ್ತಸ್ರಾವ ಆಗಿದೆ.
ರೇಣುಕಾಸ್ವಾಮಿ ಊಟ ಮಾಡಿದ ಒಂದು ಅಥವಾ ಎರಡು ಗಂಟೆಯ ಬಳಿಕ ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಹೇಳಿದೆ. ಪಟ್ಟಣಗೆರೆ ಶೆಡ್ನಲ್ಲಿಯೇ ಬಲವಂತವಾಗಿ ಊಟ ಮಾಡಿಸಿದ್ದಾರೆ. ಮರಣೋತ್ತರ ಪರೀಕ್ಷೆಯೂ ಮತ್ತೊಂದು ಮಹತ್ವದ ಅಂಶವನ್ನು ಬಹಿರಂಗ ಪಡಿಸಿದೆ. ಇದೊಂದು ಭಯಾನಕ ರಕ್ತ ಚರಿತ್ರೆ ಅಂತಾ ಕರೆಯಬೇಕು. ಇದೆಲ್ಲವೂ ದರ್ಶನ್ರಿಂದ ಮತ್ತು ದರ್ಶನ್ ಅಣತಿಯಂತೆ ನಡೆದಿದೆ ಎಂದು ಎಸ್ ಪಿಪಿ ವಾದಿಸಿದ್ದಾರೆ. ಸಮಯ ಹೆಚ್ಚಾಗಿದ್ದರಿಂದಾಗಿ ಕೋರ್ಟ್ ನಾಳೆಗೆ ವಿಚಾರಣೆ ಮುಂದೂಡಿತು.








