ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್, ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪಡೆಯುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಆದರೆ, ಇನ್ನೊಂದು ಸ್ಫೋಟಕ ಮಾಹಿತಿ ಹೊರ ಬಿದ್ದಿದ್ದು, ಅವರು ಜೈಲು ಸೇರಿದ ಮೂರು ತಿಂಗಳಲ್ಲಿ 15 ಕೆಜಿ ತೂಕ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಹಾಗಾದರೆ, ರಾಜಾತಿಥ್ಯ ಪಡೆದಿದ್ದರೆ ಇಷ್ಟೊಂದು ಪ್ರಮಾಣದಲ್ಲಿ ತೂಕ ಇಳಿಸಿಕೊಳ್ಳಲು ಸಾಧ್ಯವೇ? ಎಂಬ ಚರ್ಚೆ ಈಗ ಶುರುವಾಗಿದೆ. ಜೈಲು ಸೇರಿದಾಗಿನಿಂದ ಇಲ್ಲಿಯವರೆಗೆ ನಟ ದರ್ಶನ್ 15 ಕೆಜಿ ತೂಕ ಕಳೆದುಕೊಂಡಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೂನ್ 11ಕ್ಕೆ ಅರೆಸ್ಟ್ ಆಗಿದ್ದರು. 14 ದಿನಗಳ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು ಆಗಿನಿಂದಲೂ ಜೈಲಿನಲ್ಲೇ ಕಾಲ ಕಳೆಯುತ್ತಿದ್ದಾರೆ. ಜೈಲಿನ ಊಟ, ಏಕಾಂಗಿತನದಿಂದ ದರ್ಶನ್ ದೇಹತೂಕ ಕಳೆದುಕೊಂಡಿದ್ದಾರೆ. ಈಗ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ಅವರು ಮತ್ತಷ್ಟು ತೂಕ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜೈಲು ಅಧಿಕಾರಿಗಳ ಬಳಿ ಚಿಕಿತ್ಸೆ ಹಾಗೂ ಕೆಲವು ಸೌಲಭ್ಯಗಳಿಗೆ ಮನವಿ ಮಾಡಿದ್ದಾರೆ. ಬೆನ್ನು ನೋವಿರುವ ಕಾರಣ, ಭಾರತೀಯ ಶೈಲಿಯ ಶೌಚಾಲಯ ಬಳಸಲಾಗದು, ಪಾಶ್ಚಾತ್ಯ ಶೈಲಿಯ ಟಾಯ್ಲೆಟ್ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.
ಈಗಾಗಲೇ ಈ ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರುಚಾರ್ಜ್ ಶೀಟ್ ಸಿದ್ಧಪಡಿಸಿದ್ದು ಕೆಲವೇ ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಹೈದರಾಬಾದ್ನ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಪ್ರಕರಣಕ್ಕೆ ಸಂಬಂಧಿಸಿದ ಎಂಟು ವರದಿಗಳು ಬರುವುದು ಬಾಕಿ ಇದೆ. ಆ ವರದಿಗಳು ಬರುತ್ತಿದ್ದಂತೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ. 90 ದಿನಗಳ ಒಳಗಾಗಿ ಚಾರ್ಜ್ ಶೀಟ್ ಸಲ್ಲಿಸಬೇಕೆಂಬ ನಿಯಮವಿರುವ ಕಾರಣ ಪೊಲೀಸರು ನಿಗದಿತ ಸಮಯದ ಒಳಗಾಗಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಪವಿತ್ರಾ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ.