ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಈ ಬಾರಿ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರನ್ನಾಗಿ ಕರ್ನಾಟಕ ಸರ್ಕಾರ ಆಯ್ಕೆ ಮಾಡಿದೆ. ಆದರೆ, ಈ ನಿರ್ಧಾರಕ್ಕೆ ರಾಜ್ಯದಲ್ಲಿ ರಾಜಕೀಯ ಮತ್ತು ಧಾರ್ಮಿಕ ವಲಯಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ಈ ಆಯ್ಕೆಯನ್ನು ಸಾರ್ವಜನಿಕವಾಗಿ ವಿರೋಧಿಸಿದ್ದಾರೆ.
ಯತ್ನಾಳ್ ಅವರ ಆಕ್ಷೇಪಗಳು
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಎಕ್ಸ್‌ನಲ್ಲಿ ಮಾಡಿದ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಾನು ಮುಷ್ತಾಕ್ ಅವರನ್ನು ಲೇಖಕಿ ಮತ್ತು ಹೋರಾಟಗಾರ್ತಿಯಾಗಿ ತಾವು ಗೌರವಿಸುವುದಾಗಿ ಹೇಳಿರುವ ಅವರು, ದಸರಾ ಉದ್ಘಾಟನೆಯ ಭಾಗವಾಗಿ ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವುದು ಮತ್ತು ದೀಪ ಬೆಳಗುವುದು ಅವರ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಅವರ ಟ್ವೀಟ್‌ನಲ್ಲಿ, “ಇಸ್ಲಾಂ ಮೂರ್ತಿ ಪೂಜೆಯನ್ನು ಧಿಕ್ಕರಿಸಿ ಒಂದು ದೇವರು ಹಾಗೂ ಒಂದು ಗ್ರಂಥವನ್ನೇ ಒಪ್ಪಿಕೊಳ್ಳುತ್ತದೆ ಎಂಬ ನಂಬಿಕೆಯಲ್ಲಿ ಅವರು ಇನ್ನೂ ಇದ್ದಾರೆಯೇ, ಅಥವಾ ಎಲ್ಲಾ ಮಾರ್ಗಗಳೂ ಅಂತಿಮವಾಗಿ ಒಂದೇ ಮೋಕ್ಷಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಅವರು ನಂಬುತ್ತಾರೆಯೇ ಎಂಬುದರ ಬಗ್ಗೆ ಶ್ರೀಮತಿ ಬಾನು ಮುಷ್ತಾಕ್ ಅವರು ಸ್ಪಷ್ಟನೆ ನೀಡುವುದು ಅಗತ್ಯ,” ಎಂದು ಒತ್ತಾಯಿಸಿದ್ದಾರೆ. ಈ ಸ್ಪಷ್ಟತೆ ಇಲ್ಲದೆ ಅವರು ಉದ್ಘಾಟನೆ ಮಾಡುವುದು ಸರಿಯಲ್ಲ ಎಂದು ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ದಸರಾ ಉತ್ಸವದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಅಥವಾ ಸಾಹಿತ್ಯ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಅವರನ್ನು ಆಹ್ವಾನಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ಪ್ರತಾಪ್ ಸಿಂಹ ಅವರ ವಾದ
ಮೈಸೂರು-ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ಈ ನಿರ್ಧಾರದ ಬಗ್ಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ದಸರಾ ಒಂದು ಜಾತ್ಯತೀತ ಹಬ್ಬವಲ್ಲ, ಬದಲಾಗಿ ಶೇ. 100ರಷ್ಟು ಧಾರ್ಮಿಕ ಆಚರಣೆ ಎಂದು ಅವರು ಬಲವಾಗಿ ಹೇಳಿದ್ದಾರೆ. ಇದು ದುರ್ಗಾ ಪೂಜೆ ಮತ್ತು ನವರಾತ್ರಿ ಉತ್ಸವದೊಂದಿಗೆ ಸಂಬಂಧಿಸಿದೆ ಮತ್ತು ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸುವುದರೊಂದಿಗೆ ಆರಂಭವಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರತಾಪ್ ಸಿಂಹ ಅವರು, “ಮುಸ್ಲಿಂ ಎನ್ನುವ ಕಾರಣಕ್ಕೆ ನನ್ನ ಅಪಸ್ವರ ಎತ್ತುತ್ತಿಲ್ಲ. ಬಾನು ಮುಷ್ತಾಕ್ ಸಾಹಿತ್ಯದ ಬಗ್ಗೆ ಗೌರವವಿದೆ. ದಸರಾ ಇದು ಜಾತ್ಯತೀತತೆಯ ಪ್ರತೀಕ ಅಲ್ಲ. ಇದು ಧಾರ್ಮಿಕ ಆಚರಣೆ,” ಎಂದು ಸ್ಪಷ್ಟಪಡಿಸಿದ್ದಾರೆ. ಬಾನು ಮುಷ್ತಾಕ್ ಅವರಿಗೆ ತಾಯಿ ಚಾಮುಂಡಿ ಮೇಲೆ ನಂಬಿಕೆ ಇದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ, ಸರ್ಕಾರವು ಧಾರ್ಮಿಕ ನಂಬಿಕೆಗಳನ್ನು ವಿರೋಧಿಸುವವರನ್ನು ಏಕೆ ಕರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಶಸ್ತಿ ವಿಜೇತರಾದ ರಿಷಬ್ ಶೆಟ್ಟಿಯಂತಹವರನ್ನು ದಸರಾ ಉದ್ಘಾಟನೆಗೆ ಏಕೆ ಆಹ್ವಾನಿಸಿಲ್ಲ ಎಂದು ಪ್ರಶ್ನಿಸುವ ಮೂಲಕ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.








