ಭಾರತದ ಆಸ್ಟ್ರೇಲಿಯಾ ಪ್ರವಾಸ – ಡೇವಿಡ್ ವಾರ್ನರ್ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯ…!
ಏಕದಿನ ಮತ್ತು ಟಿ-ಟ್ವೆಂಟಿ ಸರಣಿ ಮುಗಿಯಿತ್ತು. ಏಕದಿನ ಸರಣಿಯನ್ನು ಆಸ್ಟ್ರೇಲಿಯಾ 2-1ರಿಂದ ಗೆದ್ರೆ, ಟಿ-ಟ್ವೆಂಟಿ ಸರಣಿಯನ್ನು ಟೀಮ್ ಇಂಡಿಯಾ 2-1ರಿಂದ ಜಯ ಗಳಿಸಿತ್ತು. ಹೀಗಾಗಿ ಏಕದಿನ ಮತ್ತು ಚುಟುಕು ಕ್ರಿಕೆಟ್ ನಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನೀಡಿವೆ.
ಇದೀಗ ಏನಿದ್ರೂ ಟೆಸ್ಟ್ ಸರಣಿ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆಸ್ಟ್ರೇಲಿಯಾ ಮತ್ತು ಟೀಮ್ ಇಂಡಿಯಾಗೆ ಅಗ್ನಿ ಪರೀಕ್ಷೆಯಾಗಲಿದೆ. ಉಭಯ ತಂಡಗಳ ಆಟಗಾರರ ಸಾಮಥ್ರ್ಯವನ್ನು ಅಳೆಯಲು ಟೆಸ್ಟ್ ಸರಣಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಈ ನಡುವೆ, ಉಭಯ ತಂಡಗಳಲ್ಲಿ ಗಾಯದ ಸಮಸ್ಯೆ ಕಾಡುತ್ತಿದೆ. ಸದ್ಯದ ತಂಡಗಳ ಮಾಹಿತಿಯ ಪ್ರಕಾರ ಟೀಮ್ ಇಂಡಿಯಾ ಪರ ರವೀಂದ್ರ ಜಡೇಜಾ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ವಂಚಿತರಾಗಲಿದ್ದಾರೆ. ರವೀಂದ್ರ ಜಡೇಜಾ ಸ್ನಾಯುಸೆಳೆತದಿಂದ ಬಳಲುತ್ತಿದ್ದಾರೆ.
ಏತನ್ಮಧ್ಯೆ, ಆಸ್ಟ್ರೇಲಿಯಾ ತಂಡದ ಡ್ರೆಸಿಂಗ್ ರೂಮ್ ನಿಂದಲೂ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ತಂಡದ ಪ್ರಮುಖ ಬ್ಯಾಟ್ಸ್ ಮೆನ್ ಹಾಗೂ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಎರಡನೇ ಏಕದಿನ ಪಂದ್ಯದ ವೇಳೆ ಡೇವಿಡ್ ವಾರ್ನರ್ ಕೂಡ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಡೇವಿಡ್ ವಾರ್ನರ್ ಅವರು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹಂಡ್ರೆಡ್ ಪರ್ಸೆಂಟ್ ಫಿಟ್ ಆಗಿಲ್ಲ. ಆದ್ರೆ ಟೆಸ್ಟ್ ಪಂದ್ಯಕ್ಕೆ ಇನ್ನೂ ಒಂದು ವಾರ ಇರುವುದರಿಂದ ಫಿಟ್ ಆಗೋ ಸಾಧ್ಯತೆಗಳು ಇವೆ. ಆದ್ರೂ ಖಚಿತವಾಗಿ ಹೇಳುವ ಹಾಗಿಲ್ಲ.
ಹೀಗಾಗಿ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ಆಡೋದು ಅನುಮಾನವಾಗಿದೆ. ಹೀಗಾಗಿ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಟಗಾರನ ಕೊರತೆ ಕಾಡಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 17ರಿಂದ ಆಡಿಲೇಡ್ ನಲ್ಲಿ ಆರಂಭವಾಗಲಿದೆ. ನಂತರ ಮೆಲ್ಬರ್ನ್ ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಹಾಗೂ ಸಿಡ್ನಿ ಮತ್ತು ಬ್ರಿಸ್ಬೇನ್ ನಲ್ಲಿ ಮೂರು ಮತ್ತು ನಾಲ್ಕನೇ ಟೆಸ್ಟ್ ಪಂದ್ಯ ನಡೆಯಲಿದೆ.