ಯುಗಾದಿ ಸಿಹಿ ಸುದ್ದಿ : ಸ್ಪುಟ್ನಿಕ್ ವಿ ಲಸಿಕೆ ಬಳಕೆಗೆ ಡಿಸಿಜಿಐ ಸಮ್ಮತಿ
ನವದೆಹಲಿ : ದೇಶದಲ್ಲಿ ಕೊರೊನಾ ಎರಡನೇ ಅಲೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿದಿನ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದೇಶದಲ್ಲಿ ಪತ್ತೆಯಾಗುತ್ತಿವೆ.
ಇನ್ನು ಕೊರೊನಾ ಲಸಿಕಾ ಅಭಿಯಾನ ಕೂಡ ದೇಶದಲ್ಲಿ ನಡೆಯುತ್ತಿದ್ದು, ಇದಕ್ಕೆ ಮತ್ತಷ್ಟು ವೇಗ ಕೊಡಲು ಸರ್ಕಾರ ನಿರ್ಧರಿಸಿದೆ.
ಈ ಹಿನ್ನೆಲೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ತುರ್ತು ಬಳಕೆಗೆ ತಜ್ಞರ ಸಮಿತಿ ನಿನ್ನೆ ಅನುಮೋದನೆ ನೀಡಿದ ಬೆನ್ನಲ್ಲೇ ಇದೀಗ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಕೂಡ ಇದಕ್ಕೆ ಸಮ್ಮತಿ ಸೂಚಿಸಿದೆ.
ಸ್ಪುಟ್ನಿಕ್ ವಿ ಲಸಿಕೆಯನ್ನು ಹೈದರಾಬಾದ್ ಮೂಲದ ಡಾ. ರೆಡ್ಡೀಸ್ ಲ್ಯಾಬೋರೇಟರಿ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದ್ದು, ಡಾ. ರೆಡ್ಡೀಸ್ ಲ್ಯಾಬ್ ಭಾರತದಲ್ಲಿ ಎರಡನೇ ಹಾಗೂ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಿದೆ.
ದೇಶದಲ್ಲಿ ಲಸಿಕೆಯ ತುರ್ತು ಬಳಕೆ ಅನುಮತಿ ನೀಡುವಂತೆ ಡಾ. ರೆಡ್ಡೀಸ್ ಲ್ಯಾಬ್ ಸಲ್ಲಿಸಿದ್ದ ಅರ್ಜಿಯನ್ನು ತಜ್ಞರ ಸಮಿತಿ ನಿನ್ನೆ ಅನುಮೋದಿಸಿತ್ತು.
ಇನ್ನು ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಕೊರೊನಾ ಕೇಸ್ ಗಳು ಪತ್ತೆಯಾಗಿವೆ.










