ಬಾಗಲಕೋಟೆ: ಜಿಲ್ಲೆಯ ರೈತರು ಸಕ್ಕರೆ ಕಾರ್ಖಾನೆಗಳಿಗೆ ಗಡುವು ನೀಡಿ ಎಚ್ಚರಿಕೆ ನೀಡಿದ್ದಾರೆ.
ಅಕ್ಟೋಬರ್ 28ರ ಒಳಗಡೆ 2022ರ ಸಾಲಿನ ಹೆಚ್ಚುವರಿ 62 ರೂ. ಬಾಕಿ ಹಣ ನೀಡಬೇಕೆಂದು ರೈತರು ಬಾಗಲಕೋಟೆ (Bagalkote) ಸಕ್ಕರೆ ಕಾರ್ಖಾನೆಗಳಿಗೆ (Sugarcane Mill) ಗಡುವು ನೀಡಿದ್ದಾರೆ.
ಮುಧೋಳ ನಗರದ (Mudhol) ಜಿಎಲ್‌ಬಿಸಿ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸಭೆಯಲ್ಲಿ ರೈತರು ನಿರ್ಣಯ ಕೈಗೊಂಡು, ಹೆಚ್ಚುವರಿಯಾಗಿ ಪ್ರತಿ ಟನ್ ಗೆ ನೀಡಬೇಕಿದ್ದ 62 ರೂ. ಹಣವನ್ನು ಸಮೀರವಾಡಿ ಸಕ್ಕರೆ ಕಾರ್ಖಾನೆ ಪಾವತಿಸಬೇಕು. ಉಳಿದ ಕಾರ್ಖಾನೆಯವರು ಶೀಘ್ರವೇ ಬಾಕಿ ಹಣವನ್ನು ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಾಕಿ ಹಣ ನೀಡದಿದ್ದರೆ ಅ.28 ರ ನಂತರ ಮುಂದಿನ ಹೋರಾಟದ ಕುರಿತು ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. ಸಭೆಯಲ್ಲಿ ಪ್ರಸಕ್ತ ಹಂಗಾಮಿನ ಕಬ್ಬಿನ ದರ ನಿಗದಿ ಮಾಡುವ ಕುರಿತು ಚರ್ಚೆ ನಡೆಸಲಾಯಿತು. ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ, ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ದುಂಡಪ್ಪ ಯರಗಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೊಮ್ಮಾರ, ಹನಮಂತ ನಬಾಬ, ಸುರೇಶ ಚಿಂಚಲಿ, ನಾಗೇಶ ಗೊಲಶೇಟ್ಟಿ, ಸುಭಾಶ್ ಶಿರಬೂರ, ಮಹೇಶಗೌಡ ಪಾಟೀಲ ಸೇರಿದಂತೆ ಹಲವರಿದ್ದರು.