ಬೆಂಗಳೂರು: ರಾಜ್ಯದಲ್ಲಿ ಕಿಲ್ಲರ್ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಸಿಕ್ಕ ಸಿಕ್ಕವರ ದೇಹ ಹೊಕ್ಕಿ ಮರಣ ಮೃದಂಗ ಬಾರಿಸುತ್ತಲೇ ಇದೆ.
ಬೆಂಗಳೂರಿನಲ್ಲೂ ಕೊರೊನಾ ತನ್ನ ಸವಾರಿಯನ್ನು ತುಸು ಜೋರಾಗಿ ಮುಂದುವರಿಸಿದ್ದು, ಬೆಂಗಳೂರಿನ ಅಂಬೇಡ್ಕರ್ ತಾಂತ್ರಿಕ ಕಾಲೇಜಿನ ಡೀನ್ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಇವರ ಪತ್ನಿಗೂ ಕೊರೊನಾ ವಕ್ಕರಿಸಿದ್ದು, ಅವರಿಗೆ ಸೈಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಮೃತರಿಗೆ ಕೆಲ ದಿನಗಳಿಂದೆ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಕೂಡಲೇ ಅವರು ಸೈಂಟ್ ಜಾನ್ ಆಸ್ಪತೆಗೆ ದಾಖಲಾಗಿ, ಕೋವಿಡ್ ಟೆಸ್ಟ್ ಮಾಡಿಕೊಂಡಿದ್ದರು. ಈ ವೇಳೆ ಅವರಿಗೆ ಸೋಂಕಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆ ಅವರಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿತ್ತು. ಆದ್ರೆ ಈಗ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಅವರ ಮೃತದೇಹವನ್ನು ಸಂಬಂಧಿಗಳಿಗೆ ನೀಡದೇ ಕೊರೊನಾ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ.