ಉಡುಪಿ: ಅಮಾಯಕ ಕೋತಿಗಳನ್ನು ಕೊಂದು ಮೃತ ದೇಹಗಳನ್ನು ಗೋಣಿ ಚೀಲಗಳಲ್ಲಿ ತುಂಬಿಸಿ ಮೀಸಲು ಅರಣ್ಯದಲ್ಲಿ ಎಸೆದಿರುವ ನಾಗರಿಕರೇ ತಲೆ ತಗ್ಗಿಸುವ ಪ್ರಸಂಗ ಜಿಲ್ಲೆಯ ಹೆಬ್ರಿ ತಾಲ್ಲೂಕಿನಲ್ಲಿ ನಡೆದಿದೆ. ಚೀಲಗಳನ್ನು ನೋಡಿದ ದಾರಿಹೋಕರು ಈ ವಿಷಯವನ್ನು ಹೆಬ್ರಿಯ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕೃಷಿ ಭೂಮಿಯನ್ನು ಹೊಂದಿರುವ ಮೃಗೀಯರು ಕೋತಿಗಳ ಉಪಟಳ ತಾಳಲಾಗದೆ ಮಂಗಗಳನ್ನು ಕೊಲ್ಲುವ ಮೂಲಕ ಅವುಗಳನ್ನು ದೂರವಿಡಲು ಪ್ರಯತ್ನಿಸಿದ್ದಾರೆ ಎಂದು ಶಂಕಿಸಲಾಗಿದೆ. ಹೆಬ್ರಿ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಾಸ್ತವ ಸಂಗತಿಗಳ ಕುರಿತು ಹೆಚ್ಚಿನ ಪರಿಶೀಲನೆಗಾಗಿ ಕೋತಿಗಳ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವೈದ್ಯಕೀಯ ವರದಿ ಬಂದ ಮೇಲೆ ತನಿಖೆ ಮುಂದುವರಿಯುತ್ತದೆ ಎಂದು ಕಾರ್ಕಳ ಅರಣ್ಯ ವಲಯಾಧಿಕಾರಿ ತಿಳಿಸಿದರು.








