ಸ್ವದೇಶೀ ಆಂದೋಲನದ ತುರ್ತು ಈಗೇಕಿದೆ ಗೊತ್ತಾ?
1991 ನಂತರ ದೇಶದ ಆಡಳಿತದಲ್ಲಿ ಆದ ಬದಲಾವಣೆಯ ಅನ್ವಯ ಉದಾರೀಕರಣ ಖಾಸಗೀಕರಣ ಮತ್ತು ಜಾಗತೀಕರಣ ನೀತಿಗಳು ನಮ್ಮ ಆಧುನಿಕ ಕೈಗಾರಿಕೀಕರಣಕ್ಕೆ ರಾಜಮಾರ್ಗ ಕಲ್ಪಿಸಿದವು. ವಿದೇಶಿ ಬಂಡವಾಳ ಹೂಡಿಕೆ, ವಿದೇಶಿ ತಂತ್ರಜ್ಞಾನ ವಿನಿಮಯ ಮತ್ತು ರಫ್ತು ಪ್ರಧಾನ ಬೆಳವಣಿಗೆಯ ಸಿದ್ಧಾಂತ ಸೇರಿದಂತೆ ಹಲವು ಮಹತ್ತರ ಬದಲಾವಣೆಗಳಿಗೆ ದಾರಿಯಾಯಿತು.
ಆದರೆ ಕಾಕತಾಳೀಯವೆಂಬಂತೆ ಇದಕ್ಕಿಂತ 2 ವರುಷಗಳ ಹಿಂದೆಯೇ ಭಾರತದ ಜಿ ಡಿ ಪಿ 9.6 ಪ್ರತಿಶತದಷ್ಟು ಇತ್ತು. ಮುಂದುವರಿದ ದೇಶಗಳ ಅತಿಯಾದ ಒತ್ತಾಯಕ್ಕೆ ಮಣಿದ ನಮ್ಮ ದೇಶದ ನಾಯಕರು ಸ್ವದೇಶೀ ನೀತಿಯಲ್ಲಿ ಹತ್ತು ಹಲವು ಬದಲಾವಣೆಗಳನ್ನು ತಂದರು.
ಮೊದಲ ಸ್ವದೇಶೀ ನೀತಿ:-
ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷ್ ಸರಕಾರದ ನೀತಿಯ ವಿರುದ್ಧ ಸ್ವದೇಶೀ ಆಂದೋಲನಗಳು ನಡೆದಿದ್ದನ್ನು ಇತಿಹಾಸ ದಾಖಲಿಸಿದೆ. ಇದನ್ನು ಭಾರತೀಯ ಸ್ವಾತಂತ್ರ್ಯ ಚಳವಳಿಯ ಪ್ರಮುಖ ಭಾಗವೆಂದರು ತಪ್ಪಲ್ಲ. ಮೊದಲ ಹಂತದಲ್ಲಿ ಈ ಸ್ವದೇಶಿ ಚಳುವಳಿ ರೂಪುಗೊಂಡಿದ್ದು 1850 ರಿಂದ 1904ರ ನಡುವಿನ ಅವಧಿಯಲ್ಲಿ. ಬ್ರಿಟಿಷ್ ಸರಕಾರ ಆಗ ಶಿಕ್ಷಣ ಮತ್ತು ಜನರ ಉಡುಗೆ ತೊಡುಗೆಯ ಮೇಲೆ ಬದಲಾವಣೆ ತರುವ ಪ್ರಯತ್ನ ಮಾಡಿತ್ತು. ಆ ಸಂದರ್ಭದಲ್ಲಿ ದಾದಾಭಾಯ್ ನೌರೋಜಿ, ಗೋಪಾಲಕೃಷ್ಣ ಗೋಖಲೆ, ರಾನಡೆ, ತಿಲಕ್, ಜಿ. ವಿ. ಜೋಶಿ ಮತ್ತು ಭಸ್ವತ್ ಕೆ. ನಿಗೋನಿ ಅವರಂತಹ ಮಂದಗಾಮಿ ಮತ್ತು ತೀವ್ರಗಾಮಿ ನಾಯಕರು ಒಕ್ಕೊರಲಿನಿಂದ ಬ್ರಿಟಿಷ್ ಸರಕಾರದ ನೀತಿಯ ವಿರುದ್ಧ ಸಿಡಿದ್ದೆದ್ದು ಸ್ವದೇಶೀ ಆಂದೋಲನದ ಕಲ್ಪನೆಯನ್ನು ಮರು ಸೃಷ್ಟಿಸಿದರು. ಇದು ಮೊದಲ ಸ್ವದೇಶಿ ಚಳುವಳಿ ಎಂದೂ ಕರೆಯಬಹುದೇನೋ. ಇದರ ಮಧ್ಯ ಬಾಬಾ ರಾಮ್ ಸಿಂಗ್ ಕುಕಾ 1872 ರಲ್ಲಿ ಬ್ರಿಟಿಷ್ ಕಾನೂನು ವಿರುದ್ಧ ಸಿಡಿದ್ದೆದ್ದು ದೇಶದಲ್ಲಿ ತಯಾರಿಸಿದ ಬಟ್ಟೆಗಳನ್ನು ಮಾತ್ರ ಧರಿಸಲು ಮತ್ತು ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವಂತೆ ಸೂಚನೆ ನೀಡಿದರು. ಜನರ ನ್ಯಾಯಾಲಯದಲ್ಲಿನ ಸಂಘರ್ಷವನ್ನು ಬಗೆಹರಿಸಿದರು ಮತ್ತು ಬ್ರಿಟಿಷ್ ಕಾನೂನು ಮತ್ತು ಬ್ರಿಟಿಷ್ ನ್ಯಾಯಾಲಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು. ಬಾಬಾ ರಾಮ್ ಸಿಂಗ್ ಅವರು ಬ್ರಿಟಿಷ್ ಶಾಲೆಗೆ ಹೋಗುವುದನ್ನು ನಿಷೇಧಿಸಿದ್ದರಿಂದ ಅವರು ವಿದೇಶಿ ಅಂದರೆ ಪಾಶ್ಚಿಮಾತ್ಯ ಇಂಗ್ಲೀಷ್ ಶಿಕ್ಷಣ ವ್ಯವಸ್ಥೆಯನ್ನು ಭಹಿಷ್ಕರಿಸಿದಂತಾಯ್ತು. ಇವೆಲ್ಲವೂ ನಮ್ಮ ಸ್ವದೇಶಿ ಚಳುವಳಿಯ ಇತಿಹಾಸದ ಮಹತ್ವದ ಮೈಲಿಗಲ್ಲುಗಳು. ಆದರೆ ಮುಂದೆ ಎರಡನೇ ಹಂತವಾಗಿ ಲಾರ್ಡ್ ಕರ್ಜನ್ ಆದೇಶಿಸಿದ ಬಂಗಾಳದ ವಿಭಜನೆಯಿಂದಾಗಿ 1905 ರಲ್ಲಿ ಮತ್ತೆ ಸ್ವದೇಶಿ ಪರಿಕಲ್ಪನೆಯ ಚಳುವಳಿ ಪ್ರಾರಂಭವಾಯಿತು. ಈ ಆಂದೋಲನದ ಪ್ರಭಾವ ಸುಮಾರು 1917ವರೆಗೆ ಜಾರಿಯಲ್ಲಿತ್ತು. ಬ್ರಿಟೀಶರ ಒಡೆದು ಅಳುವ ನೀತಿಗೆ ವಿರುದ್ಧವಾಗಿ ದೇಸಿ ಧ್ವನಿ ಪ್ರತಿಧ್ವನಿಸಿತ್ತು.
ಶ್ರೀಮತಿ ಜಾಂಕಿ ದೇವಿ ಬಜಾಜ್ ಗಾಂಧಿ ವೃತ್ತಿಯಲ್ಲಿ ವಕೀಲರಾಗಿದ್ದರು. ಭಾರತದ ರಾಷ್ಟ್ರೀಯತಾವಾದಿ ಚಳವಳಿಯ ಸಮಯದಲ್ಲಿ, ಅವರು ಸ್ವದೇಶಿ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಮುಂದೆ 1918 ರಿಂದ 1947 ರವರೆಗೆ ಮಾಹಾತ್ಮ ಗಾಂಧಿ ರೂಪಿಸಿದ ಸ್ವದೇಶಿ ಚಿಂತನೆ ಅನೇಕ ಸ್ವಾವಲಂಬಿ ಜೀವನಕ್ಕೆ ಅಡಿಪಾಯ ಹಾಕಿತು. ಕೇವಲ ದೇಶೀ ವಸ್ತುಗಳ ಉತ್ಪಾದನೆಗೆ ಮಹತ್ವ ನೀಡಿದ ಗಾಂಧೀಜಿ ತತ್ವ ನಿಜಕ್ಕೂ ಶ್ಲ್ಯಾಘನೀಯ ಮತ್ತು ಆ ಸಂಕ್ರಮಣ ಕಾಲಘಟ್ಟದ ಅತ್ಯಂತ ದಿಟ್ಟ ನಿರ್ಧಾರ ಎಂದರೆ ತಪ್ಪಲ್ಲ. ತೊಡುವ ಬಟ್ಟೆ ದೇಶಿಮಯವಾಗಿದ್ದರೆ ಮಾತ್ರ ನಿಜವಾದ ಭಾರತೀಯ ಅನ್ನುವ ಮನೋಭಾವನೆ ಜಾಗೃತಗೊಂಡ ಕಾಲವದು. ಗಾಂಧಿ ಪ್ರಣೀತ ಆಂದೋಲನವೆಂದರೇ ವಿದೇಶಿ ವಸ್ತುಗಳ ಭಹಿಷ್ಕಾರ ಮತ್ತು ಸ್ವದೇಶಿ ಉತ್ಪನ್ನಗಳಿಗೆ ಪ್ರೋತ್ಸಾಹ.
ಸ್ವತಂತ್ರ ನಂತರದ ಸ್ವದೇಶೀ ಆಂದೋಲನ:
ಸ್ವಾತಂತ್ರ್ಯೋತ್ತರ “ಸ್ವದೇಶಿ ಚಳುವಳಿ” ಸ್ವಾತಂತ್ರ್ಯ ಪೂರ್ವದ ಪ್ರತಿರೂಪಕ್ಕಿಂತ ವಿಭಿನ್ನವಾಗಿ ಅಭಿವೃದ್ಧಿಗೊಂಡಿತು. ಸ್ವಾತಂತ್ರ್ಯ ಪೂರ್ವದ ಚಳುವಳಿ ಮೂಲಭೂತವಾಗಿ ವಸಾಹತುಶಾಹಿ ನೀತಿಗಳಿಗೆ ಪ್ರತಿಕ್ರಿಯೆಯಾಗಿದ್ದರೂ, ಸ್ವಾತಂತ್ರ್ಯೋತ್ತರ ಸ್ವದೇಶಿ ಚಳುವಳಿ ಎರಡನೆಯ ಮಹಾಯುದ್ಧದ ನಂತರದ ವಾತಾವರಣದಲ್ಲಿ ಹೆಚ್ಚುತ್ತಿರುವ ದಬ್ಬಾಳಿಕೆಯ ಸಾಮ್ರಾಜ್ಯಶಾಹಿ ನೀತಿಗಳಿಗೆ ಉತ್ತರವಾಗಿ ಹೊರಹೊಮ್ಮಿತು. “ಪಂಚವಾರ್ಷಿಕ ಯೋಜನೆಗಳ” ಅಡಿಯಲ್ಲಿ ಕ್ಷಿಪ್ರ ಕೈಗಾರಿಕೀಕರಣವು ಸ್ವಾವಲಂಬಿ ಭಾರತವನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿದ್ದರೂ, ಅದನ್ನು ಪ್ರಧಾನವಾಗಿ ಕೃಷಿ ಸ್ಥಾಪನೆಯೊಂದಿಗೆ ಸಮತೋಲನಗೊಳಿಸುವ ಅಗತ್ಯವು ಆ ಸಮಯದ ಅಗತ್ಯವಾಗಿತ್ತು. ದೇಶದ ನೀತಿ ಸ್ವದೇಶೀ ನೀತಿಯ ಬಿಂಬಿತವಾಗಿತ್ತು. ತದನಂತರ ಆದ ಜಾಗತಿಕ ಬೆಳವಣಿಗೆ ಸ್ವದೇಶಿ ನೀತಿಯ ಉಳಿವಿಗೆ ಮುಂಚೂಣಿಯಲ್ಲಿರುವವರು ಪ್ರಸಿದ್ಧ ಪತ್ರಕರ್ತ, ಬರಹಗಾರ ಮತ್ತು ವಿಮರ್ಶಕ ಎಸ್. ಆರ್. ರಾಮಸ್ವಾಮಿ, ಜಾರ್ಜ್ ಫೆರ್ನಾಂಡಿಸ್ ಸರಕಾರದ ನೀತಿಯ ವಿರುದ್ಧ ಪ್ರತಿಭಟನೆ ಮಾಡಿದ್ದರು ಎನ್ನುವ ಸಂಗತಿಯನ್ನು ನಾವಿಲ್ಲಿ ಸ್ಮರಿಸಿಕೊಳ್ಳಬೇಕು.
1991ರ ನಂತರ ಭಾರತದ ಜಾಗತೀಕರಣ ವಿರುದ್ಧ ದೊಡ್ಡ ಧ್ವನಿ ಎತ್ತಿದವರು ಸ್ವದೇಶಿ ಜಾಗರಣ್ ಮಂಚ್ ನ ಹೋರಾಟಗಾರ ರಾಜೀವ್ ದೀಕ್ಷಿತ್, ಸ್ವಾಮಿ ರಾಮದೇವ್ ಮತ್ತು ಪವನ್ ಪಂಡಿತ್ ಮುಂತಾದ ಅನೇಕರು. ರಾಜೀವ್ ದೀಕ್ಷಿತ್ ನೇತೃತ್ವದಲ್ಲಿ ಹತ್ತು ಹಲವು ರೀತಿ ಪ್ರತಿಭಟನೆ ನಡೆಸಿದ್ದರು ಸಫಲತೆ ಸಿಕ್ಕಿರಲಿಲ್ಲ. ಆದರೆ ಸ್ವದೇಶಿ ಚಿಂತನೆಯನ್ನು ಜಾಗೃತವಾಗಿಡುವಲ್ಲಿ ಇದು ಯಶಸ್ವಿಯಾಯಿತು. ಬಾಬಾ ರಾಮದೇವ ತನ್ನ ಪತಂಜಲಿ ಉಳಿವಿಗೆ ಹೋರಾಟ ಮಾಡುವ ಹಿಂದೆ ಇದ್ದ ಪ್ರೇರಕ ಶಕ್ತಿಯೇ ರಾಜೀವ್ ದೀಕ್ಷಿತ್.
91ರ ನಂತರದ ಜಾಗತೀಕರಣ ನೀತಿ ದೇಶದ ದಿಕ್ಕನ್ನೇ ಬದಲಾಯಿಸಿತ್ತು. ದೇಶದ ಉದ್ದಗಲಕ್ಕೂ ನಡೆಯುತಿದ್ದ ಭ್ರಷ್ಟಾಚಾರ ಜಾಗತೀಕರಣದ ಬದಲಾವಣೆಯ ನಂತರ ಹೆಚ್ಚಾಯಿತು. ಮೊದಲು ದೇಶಿಯ ಕಂಪನಿಗಳನ್ನು ನಂಬಿಕೊಂಡಿದ್ದ ಜನ ವಿದೇಶಿ ಕಂಪನಿಗಳ ಆಗಮನದಿಂದ ಹೊಸ ಹೊಸ ಕ್ಷೇತ್ರದಲ್ಲಿ ಕೆಲಸವನ್ನರಿಸಿಕೊಂಡರು. ದೇಶದ ವಿದೇಶಿ ವಿನಿಮಯ ಅಧಿಕವಾಯಿತು. ಅನೇಕ ವಸ್ತುಗಳು ಅತಿ ಕಡಿಮೆ ವೆಚ್ಚದಲ್ಲಿ ದೇಶದಲ್ಲಿ ನಿರ್ಮಾಣಗತೊಡಗಿತ್ತು. ಲಕ್ಷಾಂತರ ಪದವೀಧರರು ತಮ್ಮ ಭವಿಷ್ಯ ಮುಂದೇನು ಅನ್ನುವಷ್ಟರಲ್ಲಿ ಅನೇಕ ಮಲ್ಟಿ ನ್ಯಾಷನಲ್ ಕಂಪನಿಗಳು ಕೈಬೀಸಿ ಕರೆಯತೊಡಗಿದವು.
ಚೀನಿ ವ್ಯಾಮೋಹ ಯಾಕೆ?
ಯಾವತ್ತೂ ಯಾರೂ ನಂಬಲಾಗದ ಕೃತ್ರಿಮ ಮಹಾಮೋಸದ ಗುಳ್ಳೆ ನರಿ ಸ್ವಭಾವದ ರಾಷ್ಟ್ರ ಚೀನಾ. ಚೀನಾದ ಈ ಗುಣ ಅರಿವಿಗೆ ಬರುವ ಮೊದಲೇ ವಿಶ್ವದ ಅನೇಕ ರಾಷ್ಟ್ರಗಳು ಚೀನಿಯರ ಮೋಸದ ಜಾಲಕ್ಕೆ ಸಿಲುಕಿಬಿಟ್ಟವು. ಇಲೆಕ್ಟ್ರಾನಿಕ್ ವಸ್ತುಗಳ ಮೇಲೆ ಚೀನಿ ಪ್ರಭಾವ ಎಷ್ಟಿದೆ ಅಂದರೆ, ಈಗ ಪ್ರಪಂಚದಾದ್ಯಂತ ಬಹುತೇಕ ಮನೆಗಳ ಪ್ರತಿಯೊಂದು ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಮೇಡ್ ಇನ್ ಚೀನಾ ನಮೂದಿಸಲಾಗಿದೆ. ಇನ್ನೂ ವಿಪರ್ಯಾಸವೆಂದರೆ ನಮ್ಮ ದೇಶದ ದೀಪಾವಳಿ ಹಬ್ಬದ ಜಗಮಗಿಸುವ ಲೈಟಿಂಗ್ಸ್, ಪಟಾಕಿಗಳು, ಗಣೇಶ ವಿಗ್ರಹ, ಅರಿಷಿನ ಕುಂಕುಮ ಕೂಡ ಚೀನಾದಿಂದ ಆಮದಾಗುತ್ತಿದೆ. ಈ ಹಿಂದಿನಿಂದಲೂ ಅದೆಷ್ಟೋ ಸಲ ಚೀನಾ ವಸ್ತುಗಳ ಬಹಿಷ್ಕರಿಸುವ ಕೂಗು ಕೇಳಿ ಬಂದರು ಅದು ಕೇವಲ ಅರಣ್ಯರೋಧನವಾಗಿ ಉಳಿದಿದೆ. ನಮ್ಮ ಲಾಭಕೋರ ವರ್ತಕರು ತಮ್ಮ ಸ್ವಂತ ಸ್ವಾರ್ಥಕ್ಕಾಗಿ ಅವಲಂಭಿಸಿರುವುದು ಇದೇ ಚೀನಾದ ಉತ್ಪನ್ನಗಳನ್ನೇ.
ಇನ್ನು ಒಪ್ಪೋ, ಒನ್ ಪ್ಲಸ್, ವಿವೊ , ಎಂಐ, ರೆಅಲ್ಮೆ , ಮೊಟೊರೊಲಾ , ಹಾನರ್ , ಜಿವೋಮಿ, ಕೋಲ್ಪಾದ್, ಲೆನೊವೊ, ಹೈಯರ್, ಹೂಅವೆಲಿ, ಮೆಯ್ಝು ಇನ್ನು ಹತ್ತು ಹಲವು ಮೊಬೈಲ್ ಕಂಪನಿಗಳು ಭಾರತದ ಮಾರುಕಟ್ಟೆಯಲ್ಲಿ ತನ್ನದೇ ಪ್ರಾಬಲ್ಯ ಸಾಧಿಸಿದೆ. ಅಷ್ಟೇ ಅಲ್ಲ ಮೊಬೈಲ್ ಆ್ಯಪ್ ಗಳಾದ ಟಿಕ್ ಟಾಕ್, ಶೇರ್ ಇಟ್, ಹೆಲೋ, ಯು.ಸಿ ಬ್ರೌಸರ್ ಮಿನಿ , ಲೈವ್ ಮಿ, ಬಿಗೋ ಲೈವ್, ವಿಗೋ ವಿಡಿಯೋ ಬ್ಯೂಟಿಪ್ಲ್ಯೂಸ್ ಇನ್ನು ಮುಂತಾದ ಹತ್ತು ಹಲವು ಅಪ್ ಗಳು ದಿನನಿತ್ಯ ನಮ್ಮಲ್ಲಿ ಬಳಕೆಯಾಗುತ್ತಿದೆ.
ಚೀನಾ ಕ್ಯಾತೆ:
ದೇಶ ಸ್ವತಂತ್ರ ಸಿಕ್ಕಾಗಿಂದ ಚೀನಾ ಒಂದಲ್ಲ ಒಂದು ರೀತಿ ನಮ್ಮ ದೇಶದ ಮೇಲೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಯುದ್ಧ ಸಾರುತ್ತಲೇ ಇದೆ. ಈಗಿರುವ ಚೀನಾ ಅರ್ಧಕ್ಕಿಂತ ಹೆಚ್ಚಿನ ಭಾಗ ಅಕ್ರಮ ನೆಲ. ಚೀನಾ ರೆವೊಲ್ಯೂಷನ್ ಬಹು ಮುಖ್ಯ ಪಾತ್ರವೇ ಸಾಮ್ರಾಜ್ಯ ಶಾಹಿ ಅಥವಾ ನವ ವಸಾಹತುಶಾಹಿ ಧೋರಣೆ. ಮೊದಲು ಮಂಗೋಲಿಯಾದ ಭೂಪ್ರದೇಶ ಆಕ್ರಮಣ ಮಾಡಿದ ಚೀನಾ ನಂತರ ನಿದಾನವಾಗಿ ಕ್ಸಿನ್‌ಜಿಯಾಂಗ್ ಮೇಲೆ ಪ್ರಭುತ್ವ ಸಾಧಿಸಿತು. ಟಿಬೆಟ್ ಮೇಲೆ ಅಕ್ರಮಣ ಮಾಡಿತು. ಆದರೆ ಇದರ ಮಿತಿ ಇಲ್ಲಿಗೂ ಮುಗಿದಿರಲಿಲ್ಲ ಮುಂದೆ ನಮ್ಮ ಸಾರ್ವಭೌಮ ಭಾರತದ ಭೂಪ್ರದೇಶವನ್ನು ವಶಪಡಿಸಿಕೊಂಡಿತು. ಈಗಲೂ ತನ್ನ ಆಕ್ರಮಣಕಾರಿ ನೀತಿಯನ್ನು ಪ್ರದರ್ಶಿಸುತ್ತಲೇ ಇದೆ. ಇನ್ನು ನೆರೆಯ ಜಪಾನ್, ಕೊರಿಯಾ, ತೈವಾನ್, ಫಿಲಿಪೈನ್ಸ್ ದ್ವೀಪ ರಾಷ್ಟ್ರಗಳ ಮೇಲು ಒಂದಲ್ಲ ಒಂದು ರೀತಿ ಆಕ್ರಮಣ ಮಾಡುತ್ತಲೇ ಇದೆ. ಇದ್ಯಾವುದೂ ಗುಟ್ಟಾಗಿ ನಡೆದಿದ್ದಲ್ಲ.
2020:
ಅದೇಕೋ ವಿಶ್ವಕ್ಕೆ ಈ ವರ್ಷ ಅತ್ಯಂತ ಭಯಾನಕ ಅನ್ನುವ ಕುಖ್ಯಾತಿಗೆ ಪಾತ್ರವಾಗಿದೆ. ಚೀನಿಯರು ಜಗತ್ತಿಗೆ ಕೊಟ್ಟ ಉಡುಗೊರೆ ಕೊರೊನ ಸೋಂಕು ಈಗಾಗಲೇ ಒಂದು ಕೋಟಿಗಿಂತ ಅಧಿಕ ಜನರ ಮೇಲೆ ಪ್ರಭಾವ ಬೀರಿದೆ. ಚೀನಾ ದೇಶ ಈ ರೋಗದ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರೇ, ಪ್ರಾಯಶಃ ಎಲ್ಲ ದೇಶಗಳು ಬಲಿಪಶು ಆಗುವುದನ್ನು ತಪ್ಪಿಸಬಹುದಿತ್ತೇನೋ. ಇಡೀ ಪ್ರಪಂಚದ ಆರ್ಥಿಕ ಸ್ಥಿತಿಯಂತೂ ಹೇಳತೀರದು. ಆದರೆ ಇಷ್ಟಾದರೂ ಚೀನಾ ಮಾತ್ರ ತನ್ನ ನರಿ ಬುದ್ದಿಯನ್ನು ಬಿಡಲಿಲ್ಲ. ರೋಗ ಹರಡಿದಲ್ಲದೆ ಭಾರತದ ಗಡಿ ಭಾಗದಲ್ಲಿ ನುಗ್ಗಿ ದೇಶದ ಸೈನಿಕರ ಮೇಲೆ ದಾಳಿ ಮಾಡಿ 20 ಸೈನಿಕರು ಹುತಾತ್ಮರಾದರು. ಇದೀಗ ಗಡಿಯುದ್ದಕ್ಕೂ ಸೈನಿಕರನ್ನು ಜಮಾಯಿಸಿ ಯುದ್ಧ ಸಾರಲು ಹೊರಟಿದೆ. ರಾಜತಾಂತ್ರಿಕ ಮಾತುಕತೆ ಒಂದು ಕಡೆಯಾದರೆ ಚೀನಾ ಸೈನಿಕರ ದಾಂದಲೆ ಇನ್ನು ಕಡಿಮೆ ಆಗಲಿಲ್ಲ. ಯಾವಾಗ ಶಸ್ತ್ರ ರಹಿತ ಸೈನಿಕರ ಮೇಲೆ ದಾಳಿ ಮಾಡಿ ಹತ್ಯೆಮಾಡಿದರೋ ಆಗಲೇ ದೇಶಾದ್ಯಂತ ಬಂದ ಕೂಗು ಬ್ಯಾನ್ ಚೀನಾ ಪ್ರಾಡಕ್ಟ್.
ಯಾಕಿ ಚೀನಾ ಪ್ರಾಡಕ್ಟ್ ಬ್ಯಾನ್ ಮಾಡಬೇಕು?
ಚೀನಾ ವಿಶ್ವಾದ್ಯಂತ ನಾನಾ ರೀತಿ ತನ್ನ ಮಾರುಕಟ್ಟೆಯನ್ನು ನಿರ್ಮಿಸಿಕೊಂಡಿದೆ ಹಾಗೂ ವಿಸ್ತರಿಸುತ್ತಿದೆ. ಈ ದೇಶದ ಸಾಮ್ರಾಜ್ಯಶಾಹಿ ಧೋರಣೆ ಕೊರೊನಗಿಂತಲೂ ಅಪಾಯಕಾರಿ. ಅದರ ಸುಳಿಗೆ ಸಿಲುಕಿರುವ ನಮ್ಮ ನೆರೆಯ ಪಾಕಿಸ್ತಾನ ಮತ್ತು ನೇಪಾಳ ಕೆಲವೇ ವರ್ಷದಲ್ಲಿ ಚೀನಾ ಪಾಲಾದರು ಆಶ್ಚರ್ಯವಿಲ್ಲ. ಭಾರತದಲ್ಲೂ ಚೀನಾ ಸುಮಾರು ಇಪ್ಪತ್ತಕ್ಕಿಂತಲೂ ಅಧಿಕ ಕಂಪನಿಗಳಲ್ಲಿ ಬಂಡವಾಳ ಹೂಡಿದೆ. ಅನೇಕ ರೀತಿಯ ಸ್ಟಾರ್ಟ್ ಅಪ್ ಕಂಪನಿಗಳಾದ ಪೇಟಿಎಂ, ಓಲಾ, ಓಯೋ, ಬೈಜುಸ್ ಇನ್ನು ಮುಂತಾದ 90ಕ್ಕೂ ಅಧಿಕ ಕಂಪೆನಿಗಳಲ್ಲಿ ಬಂಡವಾಳ ಸುರಿದಿದೆ. ನಾವಿಷ್ಟು ಎಚ್ಚರಿಕೆ ವಹಿಸಿದರೂ ಚೀನಿಯರ ವ್ಯವಹಾರ ಭಾರತದೊಳಗೆ ಸಲೀಸಾಗಿ ನಡೆಯುತ್ತಲೇ ಇದೆ.
ಹಾಗಾದರೆ ಚೀನಾ ವಸ್ತುಗಳನ್ನು ಬ್ಯಾನ್ ಮಾಡಬಹುದೇ? ಇದರಿಂದ ಏನಿದೆ ಭಾರತಕ್ಕೆ ಲಾಭ? ಆಗುವ ನಷ್ಟ ಏನು ? ಚೀನಾದಿಂದ ಆಮದು ಮಾಡುವ ಒಟ್ಟಾರೆ 33 ಪ್ರತಿಶತಃ ಮಾತ್ರ ಚೀನಾಕ್ಕೆ ರಫ್ತು ಆಗುತ್ತೆ. ಅಂದರೆ ಸುಮಾರು 67 ಪ್ರತಿಶತದಷ್ಟು ವ್ಯಾಪಾರದ ಕೊರತೆ ಅನುಭವಿಸುತ್ತಿದ್ದೀವಿ. ಇದರಲ್ಲಿ ಮುಖ್ಯವಾಗಿ ಇಲೆಕ್ಟ್ರಾನಿಕ್ ಮತ್ತು ನ್ಯೂಕ್ಲಿಯರ್ ರಿಯಾಕ್ಟರ್ ಗಳದೆ ಪಾರುಪತ್ಯ. ವಿಪರ್ಯಾಸವೇನೆಂದರೆ ನಮ್ಮ ದೇಶದ ಪ್ರತಿ ದಿನ ನಿತ್ಯದ ವಸ್ತು ಚೀನಾ ನಿರ್ಮಿತವಾಗಿದೆ ಎಂದರೆ ಜಾಗತೀಕರಣ ಛಾಯೆ ಎಷ್ಟಿದೆ ಅನ್ನುವುದು ಊಹಿಸಲು ಅಸಾಧ್ಯ.
ಸ್ವದೇಶೀ ಆಂದೋಲನ 2020:
ಈಗಾಗಲೇ ಕೊರೊನ ಮಹಾಮಾರಿಯಿಂದ ಹೊರಬರಲು “ಆತ್ಮ ನಿರ್ಭರ್ ಭಾರತ” ಕಲ್ಪನೆಯನ್ನು ಪ್ರಧಾನಿ ಮೋದಿ ನೀಡಿದ್ದರು. ಆದರೆ ಕೆಲವೊಂದು ಕ್ಷೇತ್ರದಲ್ಲಿ ಇದು ಅಸಾಧ್ಯವೆನ್ನುವ ಕೂಗು ಕೇಳಿ ಬಂದಿದೆ. ಆದರೆ ಯಾವಾಗ ನಮ್ಮ ಸೇನೆಯ ಮೇಲೆ ದಾಳಿ ಮಾಡಿದರೋ, ಈ ದೇಶಕ್ಕೆ ಸ್ವದೇಶೀ ಚಳುವಳಿಯ ಅಗತ್ಯವಿದೆ ಅನ್ನುವ ಅರಿವು ಜನರಲ್ಲಿ ಆಗಿದೆ. ಈ ಹಿಂದೆ ರಾಜೀವ್ ದೀಕ್ಷಿತ್ ಇದರ ಅಗತ್ಯದ ಬಗ್ಗೆ ದೇಶದ ಉದ್ದಾಗಲಕ್ಕೂ ಸಂಚರಿಸಿ ಜನರಲ್ಲಿ ಕಿವಿ ಮಾತು ಹೇಳಿದರು. ಆದರೆ ಇಂದು ರಾಜೀವ್ ನಮ್ಮೊಂದಿಗಿಲ್ಲ. ಅವರ ಸ್ವದೇಶೀ ಚಳುವಳಿಯ ಉದ್ದೇಶ ಈಗಂತೂ ಖಂಡಿತ ಅಗತ್ಯವಿದೆ. ಹೆಚ್ಚಿನ ದೇಶಗಳು ತನ್ನ ಡಿಫೆನ್ಸ್ ಫೋರ್ಸ್ ಮೇಲೆ ದೇಶದ ಹೆಚ್ಚಿನ ಆದಾಯವನ್ನು ಸುರಿಯುತ್ತೆ. ಚೀನಾದಂತಹ ದೇಶಕ್ಕೆ ಭಾರತದಿಂದ ವಿವಿಧ ರೀತಿ ಸಾವಿರಾರು ಕೋಟಿ ವರ್ಷಕ್ಕೆ ಸಂದಾಯ ಆಗುತ್ತೆ. ಅಂತಹ ದುಡ್ಡನ್ನು ಈಗ ನಮ್ಮ ದೇಶದ ವಿರುದ್ದವೇ ಷಡ್ಯಂತ್ರ ರಚಿಸಲು ತನ್ನ ಮಿಲಿಟರಿಗೆ ಚೀನಾ ಉಪಯೋಗಿಸಿಕೊಳ್ಳುತ್ತಿದೆ ಎಂದಾದರೆ ಸ್ವದೇಶೀ ಆಂದೋಲನ ಯಾಕೆ ಮತ್ತೆ ಜಾರಿಗೆ ಬರಬಾರದು?
ಸಮಸ್ಯೆ:
ಖಂಡಿತ ಚೀನಾದ ಕೆಲವು ವಸ್ತುಗಳನ್ನು ಒಮ್ಮೆಲೇ ಬ್ಯಾನ್ ಮಾಡಲು ಸುಲಭ ಸಾಧ್ಯವಿಲ್ಲ. ಮೊದಲು ನಾವು ಸ್ವಾವಲಂಬಿಗಳಾಗಬೇಕು. ನಮ್ಮ ದೇಶದ ಉತ್ಪನ್ನಗಳಿಗೆ ಮೊದಲ ಆದ್ಯತೆ ಕೊಡಬೇಕು. ಶತ್ರು ರಾಷ್ಟ್ರಗಳಿಂದ ಯಾವೆಲ್ಲ ಪ್ರಾಡಕ್ಟ್ ಎಗ್ಗಿಲ್ಲದೆ ಬರುತ್ತಿವೆ ಅನ್ನುವುದನ್ನು ಗುರುತಿಸಿ ಅಂತಹ ವಸ್ತುಗಳನ್ನು ನಮ್ಮಲ್ಲಿ ಉತ್ಪಾದನೆ ಮಾಡುವ ಸಾಮರ್ಥ್ಯ ಸೃಷ್ಟಿಮಾಡಬೇಕು. ಆದರೆ ನಮ್ಮ ದೇಶದಲ್ಲಿ ಸಿಕ್ಕುವ ಈ ಉತ್ಪನ್ನಗಳು ಇತರ ದೇಶದಲ್ಲಿ ಅತಿ ಕಡಿಮೆಗೆ ಸಿಗುತ್ತೆ ಅನ್ನುವ ಒಂದೇ ಕಾರಣಕ್ಕೆ ದೇಶದೊಳಗೆ ನುಗ್ಗಬಲ್ಲ ಅಂತಹ ವಸ್ತುಗಳನ್ನು ಸರಕಾರ ಕೂಡಲೇ ಗುರುತಿಸಿ ಅಧಿಕ ತೆರಿಗೆ ಹಾಕಬೇಕು ಅಥವಾ ನಿರ್ಧಾಕ್ಷೀಣವಾಗಿ ಬ್ಯಾನ್ ಮಾಡಬೇಕು. ಇದು ಸರ್ಕಾರದ ಕೈನಲ್ಲಿದೆ. ಸರಕಾರ ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳನ್ನು ಗುರುತಿಸಿ ಅವರ ಉತ್ಪನ್ನಗಳಿಗೆ ದೇಶೀ ಮಟ್ಟದಲ್ಲಿ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕಾಗಿದೆ. ಸ್ವದೇಶೀ ಅನ್ನುವ ಹೊಸ ಸ್ವಾಯತ್ತ ಸಂಸ್ಥೆಯನ್ನು ಜಿಲಾ ಮಟ್ಟದಲ್ಲಿ ಸ್ಥಾಪಿಸಬೇಕು. ಆದರೆ “ಆತ್ಮ ನಿರ್ಬರ್ ಭಾರತ್” ಮೋದಿ ಕಲ್ಪನೆ ಎಷ್ಟರ ಮಟ್ಟಿಗೆ ಜಾರಿ ಆಗುತ್ತೆ ಅನ್ನುವುದು ಕಾಲವೇ ನಿರ್ದರಿಸಬೇಕಾಗಿದೆ.
ಕೊನೆಯದಾಗಿ ಒಂದು ಮಾತು:
ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ, ಕಿಂಚಿತ್ತಾದರೂ ನಮ್ಮ ಯೋಧರ ಮೇಲೆ ಗೌರವ ಇದ್ದರೆ ಆದಷ್ಟು ಚೀನಾ ಆ್ಯಪ್ ಗಳನ್ನೂ ಅನ್ ಇನ್ಸ್ಟಾಲ್ ಮಾಡಿ. ನಮ್ಮನ್ನು ಕಾಯಲು ಗಡಿಯಲ್ಲಿ ನಮ್ಮ ಯೋಧರು ಜೀವದ ಹಂಗು ತೊರೆದು ನಿಂತಿದ್ದಾರೆ. ಆದರೆ ನಾವು ಉಪಯೋಗ ಮಾಡುವ ಇವೇ ಟಿಕ್ ಟಾಕ್ ನಂತಹ ಅಪ್ರಯೋಜಕ ಆ್ಯಪ್ ಗಳು, ಚೀನಾ ಸರಕಾರಕ್ಕೆ ಅವರ ಸೈನಿಕ ಬಲಾಭಿವೃದ್ದಿಗೆ ನೇರವಾಗಿ ಹಣ ಒದಗಿಸುತ್ತಿದೆ. ಆದಷ್ಟು ದೇಶೀ ವಸ್ತುಗಳನ್ನು ಉಪಯೋಗಿಸುವ ಸಂಕಲ್ಪ ಕೈಗೊಳ್ಳೋಣ. ನಮ್ಮ ದೇಶದಲ್ಲಿ ಲಭ್ಯವಿಲ್ಲದ ವಸ್ತುಗಳಿಗೆ ಲಭ್ಯತೆ ಕಲ್ಪಿಸುವ ಕರ್ತವ್ಯ ಸರಕಾರ ಕೈಯಲ್ಲಿದೆ. ಇದರ ಹೊರತಾಗಿಯೂ ದೇಶದ ಪ್ರಜೆಗಳಾಗಿ ನಮಗೂ ಒಂದಷ್ಟು ಕರ್ತವ್ಯಗಳಿವೆಯಲ್ಲ. ಸೋ ಬ್ಯಾನ್ ಚೀನಾ ಪ್ರಾಡೆಕ್ಟ್.
– ಶರಣ್ ರೈ.