ವಿಶ್ವದ ಮೊದಲ ಕೊರೋನಾ ಲಸಿಕೆ ಪಡೆದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಾಸ್ಕೋ,ಸೆಪ್ಟೆಂಬರ್05: ಕೊರೋನವೈರಸ್ ವಿರುದ್ಧ ವಿಶ್ವದ ಮೊಟ್ಟಮೊದಲ ನೋಂದಾಯಿತ ರಷ್ಯಾದ ಲಸಿಕೆಯನ್ನು ಶಾಂಘೈ ಸಹಕಾರ ಸಂಸ್ಥೆಯ (ಎಸ್‌ಸಿಒ) ರಕ್ಷಣಾ ಮಂತ್ರಿಗಳಿಗೆ ನೀಡಲಾಯಿತು.
ವಿಶ್ವದ ಮೊಟ್ಟಮೊದಲ ನೋಂದಾಯಿತ ರಷ್ಯಾದ ಕೊರೋನವೈರಸ್ ಲಸಿಕೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ), ಕಾಮನ್‌ವೆಲ್ತ್ ಆಫ್ ಇಂಡಿಪೆಂಡೆಂಟ್ ಸ್ಟೇಟ್ಸ್ (ಸಿಐಎಸ್), ಸಾಮೂಹಿಕ ಭದ್ರತಾ ಒಪ್ಪಂದ ಸಂಸ್ಥೆ (ಸಿಎಸ್‌ಟಿಒ) ಮತ್ತು ಸೆರ್ಬಿಯಾ ಗಣರಾಜ್ಯದ ಇತರ ರಕ್ಷಣಾ ಮಂತ್ರಿಗಳಿಗೆ ನೀಡಲಾಯಿತು ಎಂದು ರಷ್ಯಾ ರಕ್ಷಣಾ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ.
ನಿನ್ನೆಯಷ್ಟೇ, ರಾಜನಾಥ್ ಸಿಂಗ್ ಅವರು ದೇಶದಲ್ಲಿ ಕೊರೋನವೈರಸ್ ಯಶಸ್ವಿಯಾಗಿ ನಿಯಂತ್ರಿಸಿದ್ದಕ್ಕಾಗಿ ಸರ್ಕಾರ ಮತ್ತು ರಷ್ಯಾ ಜನರನ್ನು ಅಭಿನಂದಿಸಿದ್ದರು ಮತ್ತು ಮಾರಕ ಕಾಯಿಲೆಯ ವಿರುದ್ಧ ಲಸಿಕೆ ಅಭಿವೃದ್ಧಿಪಡಿಸಿದ್ದಕ್ಕಾಗಿ ಅದರ ವಿಜ್ಞಾನಿಗಳನ್ನು ಶ್ಲಾಘಿಸಿದ್ದರು.
ಶುಕ್ರವಾರ ನಡೆದ ಎಸ್‌ಸಿಒ ಸಭೆಯಲ್ಲಿ ಮಾತನಾಡಿದ ಸಿಂಗ್, ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕಾಗಿ ಸರ್ಕಾರ ಮತ್ತು ರಷ್ಯಾದ ಜನರನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದ್ದರು.
ರಷ್ಯಾದ ವಿಜ್ಞಾನಿಗಳು ಕೋವಿಡ್-19, ವಿರುದ್ಧ ವಿಶ್ವದ ಮೊದಲ ಲಸಿಕೆ ಸ್ಪುಟ್ನಿಕ್-ವಿಯನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಳೆದ ತಿಂಗಳು ಘೋಷಿಸಿದ್ದರು. ತನ್ನ ಹೆಣ್ಣುಮಕ್ಕಳಿಗೆ ಈಗಾಗಲೇ ಲಸಿಕೆ ಹಾಕಲಾಗಿದೆ. ಅದು ಸಾಕಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸ್ಥಿರವಾದ ರೋಗನಿರೋಧಕ ಶಕ್ತಿಯನ್ನು ರೂಪಿಸುತ್ತದೆ ಎಂದು ಅವರು ಹೇಳಿದರು. ಏತನ್ಮಧ್ಯೆ, ಭಾರತದಲ್ಲಿ ಸ್ಥಳೀಯವಾಗಿ ಲಸಿಕೆ ತಯಾರಿಸಲು ರಷ್ಯಾ ಪ್ರಮುಖ ಔಷಧ ತಯಾರಕರೊಂದಿಗೆ ಮಾತುಕತೆ ನಡೆಸುತ್ತಿದೆ.








