ದೆಹಲಿ ಚುನಾವಣಾ ರಿಸಲ್ಟ್ : “ಕೇಸರಿ” ಎದೆಯಲ್ಲಿ ಢವಢವ!

1 min read
Delhi Election 2020

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ದಿಲ್ಲಿವಾಲಾಗಳು ದಿಲ್ ಗೆಲ್ಲಲು ವಿಫಲವಾದ ಬಿಜೆಪಿಗೆ ಹೊಸ ಟೆನ್ಷನ್ ಶುರುವಾಗಿದೆ. ಇದೇ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆ ಬಿಜೆಪಿ ಹಾಗೂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಾಲಿಗೆ ಅತ್ಯಂತ ಮುಖ್ಯವಾದ ಚುನಾವಣೆಯಾಗಿದೆ. ಹೀಗಾಗಿ ಬಿಹಾರದಲ್ಲಿ ಅಬ್ಬರಿಸಲೇಬೇಕಾದ ಒತ್ತಡದಲ್ಲಿದೆ ಬಿಜೆಪಿ.

7 ವಿಧಾನಸಭಾ ಚುನಾವಣೆ ಸೋತ ಬಿಜೆಪಿ..!

2018ರ ಆರಂಭದಲ್ಲಿ ಭಾರತೀಯ ಜನತಾ ಪಾರ್ಟಿ ದೇಶದ ಒಟ್ಟು 21 ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಆದರೆ 2018ರ ಬಳಿಕ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಸತತ ಸೋಲುಗಳನ್ನೇ ಅನುಭವಿಸುತ್ತಾ ಬಂದಿದೆ. ಕಳೆದ 14 ತಿಂಗಳಲ್ಲಿ ಒಟ್ಟು 7 ಚುನಾವಣೆಗಳನ್ನು ಸೋತಿರುವ ಕೇಸರಿ ಪಡೆ, 5 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದೆ. ಅದರಲ್ಲೂ ಬಿಹಾರಕ್ಕೆ ಹೊಂದಿಕೊಂಡಿರುವ ಜಾರ್ಖಂಡ್ ನಲ್ಲಿ ಬಿಜೆಪಿ ಅಧಿಕಾರವನ್ನ ಕಳೆದುಕೊಂಡಿದೆ. ಇದು ಭಾರತೀಯ ಜನತಾ ಪಕ್ಷದ ಪಾಲಿಗೆ ದೊಡ್ಡ ಟೆನ್ಶನ್ ಆಗಿದೆ.

ಬಿಹಾರ ಬಿಜೆಪಿಯಲ್ಲಿಲ್ಲ ಜನಪ್ರಿಯ ನಾಯಕರು!

ಹೌದು…! ದೆಹಲಿಯಲ್ಲಿ ಬಿಜೆಪಿಗೆ ಸೋಲಿಗೆ ಮುಖ್ಯ ಕಾರಣವಾಗಿದ್ದು, ಸ್ಥಳೀಯ ನಾಯಕರ ಕೊರತೆ. ದೆಹಲಿಯಲ್ಲಿ ಬಿಜೆಪಿಗೆ ಹೇಳಿಕೊಳ್ಳುವ ನಾಯಕರಿರಲಿಲ್ಲ. ಮೋದಿ ಹೆಸರಲ್ಲೇ ಕೇಸರಿ ಪಡೆ ಚುನಾವಣೆ ಎದುರಿಸಿತ್ತು. ಆದ್ರೆ ಇದು ವರ್ಕ್ಔಟ್ ಆಗಿಲ್ಲ. ಇತ್ತ ಬಿಹಾರದ ವಿಷಯಕ್ಕೆ ಬಂದ್ರೆ ಬಿಹಾರ ರಾಜ್ಯ ಬಿಜೆಪಿ ಪಾಳೆಯದಲ್ಲೂ ಜನಪ್ರಿಯ ನಾಯಕರಿಲ್ಲ. ಹೀಗಾಗಿ ಬಿಜೆಪಿ ನಾಯಕರು ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಚಿಂತನೆ ನಡೆಸಿದ್ದಾರೆ.

ಮುಳುವಾಗುತ್ತಾ ಮೀಸಲಾತಿ ವಿಷಯ..!

ದೇಶಾದ್ಯಂತ ವಿವಾದದ ವಿಷಯವಾಗಿರುವ ಬಡ್ತಿ ಮೀಸಲಾತಿ ಬಿಹಾರ ಚುನಾವಣೆಯಲ್ಲಿ ಸ್ಫೋಟಗೊಳ್ಳುವ ಸಾಧ್ಯತೆಗಳಿವೆ. ಅದು ಬಿಜೆಪಿಗೆ ಸಂಕಷ್ಟ ತಂದೊಡ್ಡಿದರೂ ಅಚ್ಚರಿ ಇಲ್ಲ. ಈ ಎಲ್ಲಾ ವಿಚಾರಗಳನ್ನ ಅತ್ಯಂತ ಸೂಕ್ಷ್ಮವಾಗಿ ಗ್ರಹಿಸಿರುವ ಬಿಜೆಪಿ ನಾಯಕರು, ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲು ನಿರ್ಧರಿಸಿದ್ದಾರೆ. ಆದರೂ ದೆಹಲಿ ಚುನಾವಣಾ ಸೋಲು ಬಿಜೆಪಿ ಪಾಳಯವನ್ನು ಇನ್ನಿಲ್ಲದ ಚಿಂತೆಗೀಡು ಮಾಡಿರುವುದಂತೂ ಸುಳ್ಳಲ್ಲ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd