ರಾಯಚೂರು: ಜಿಲ್ಲೆಯ ಭಾರಿ ಮಳೆ ಮತ್ತು ಕೃಷ್ಣಾ ನದಿಯ ಆರ್ಭಟದಿಂದಾಗಿ ಹಲವಾರು ಗ್ರಾಮಗಳು ನಡುಗಡ್ಡೆಗಳಾಗಿ ಮಾರ್ಪಟ್ಟಿವೆ. ಹೀಗೆ ಕಡದರಗಡ್ಡಿ ಎಂಬ ಪ್ರದೇಶವೂ ಜಲಾವೃತಗೊಂಡಿದ್ದು, ಅಲ್ಲಿ ನಾಲ್ಕು ಮಂದಿ ಸಿಲುಕಿಕೊಂಡಿದ್ದಾರೆ. ನದಿಯಲ್ಲಿ ಕಲ್ಲು ಬಂಡೆ ಹೆಚ್ಚು ಇರುವುದರಿಂದ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ. ಜಾನುವಾರು ಹಾಗೂ ಜಮೀನಿಗಾಗಿ ನಾಲ್ಕು ಜನ ಗಡ್ಡೆಯಲ್ಲಿಯೇ ಉಳಿದಿದ್ದಾರೆ. ಈಗ ವಾಪಸ್ ಬರಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.
ಹೀಗಾಗಿ ಜಿಲ್ಲಾಡಳಿತ ಡ್ರೋನ್ ಮೂಲಕ ನಡುಗಡ್ಡೆಯಲ್ಲಿ ಸಿಲುಕಿರುವವರಿಗೆ ಮಾತ್ರೆಗಳನ್ನು ಆಹಾರ ರವಾನಿಸಿದೆ. ನಾಲ್ವರ ಪೈಕಿ ತಿಪ್ಪಣ್ಣ ಅವರಿಗೆ ಪಾಶ್ರ್ವವಾಯು ಇರುವುದರಿಂದ ತುರ್ತು ಔಷಧಿ ಅಗತ್ಯವಿದೆ. ಅಲ್ಲದೆ ಮೈ-ಕೈ ನೋವು ಎಂದು ಹೇಳಿದ ಹಿನ್ನಲೆ ಡ್ರೋನ್ ಬಳಸಿ ಹದಿನೈದು ದಿನಗಳಿಗೆ ಆಗವಷ್ಟು ಮಾತ್ರೆಯನ್ನು ತಾಲೂಕು ಆಡಳಿತ ಕಳುಹಿಸಿಕೊಟ್ಟಿದೆ.
ರಾಯಚೂರು ಕೃಷಿ ವಿವಿಯಲ್ಲಿರುವ ಡ್ರೋನನ್ನು ನಡುಗಡ್ಡೆಯ ಜನರಿಗಾಗಿ ಬಳಕೆ ಮಾಡಲಾಗಿದೆ. ಕೃಷಿ ವಿಶ್ವವಿದ್ಯಾಲಯದ ತಂತ್ರಜ್ಞರ ಮಾರ್ಗದರ್ಶನದಲ್ಲಿ ಡ್ರೋನ್ ಬಳಕೆ ಮಾಡಲಾಗುತ್ತಿದೆ. ಜಮೀನಿನಲ್ಲಿನ ಬೆಳೆಗಳಿಗೆ ಔಷಧಿ ಸಿಂಪಡಣೆ ಮಾಡಲು ತಯಾರಿಸಿದ ಡ್ರೋನ್ ಮಾದರಿಯನ್ನು ಇದೇ ಪ್ರಥಮ ಬಾರಿಗೆ ನಡುಗಡ್ಡೆಯಲ್ಲಿದ್ದವರಿಗೆ ಸಹಾಯ ಮಾಡಲು ಬಳಸಲಾಗಿದೆ.