ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ (Dengue Case) ಆತಂಕ ಇನ್ನೂ ಕಡಿಮೆಯಾಗುತ್ತಿಲ್ಲ. ಇಲ್ಲಿಯವರೆಗೆ ಡೆಂಗ್ಯೂಗೆ 10 ಮಂದಿ ಬಲಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 19 ಸಾವಿರಕ್ಕೆ ಏರಿಕೆ ಕಂಡಿದೆ.
ಅಲ್ಲದೇ, ರಾಜ್ಯದಲ್ಲಿ 2,406 ಡೆಂಗ್ಯೂ ಪ್ರಕರಣಗಳು ಸಕ್ರಿಯವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಕಳೆದ 24 ಗಂಟೆಗಳಲ್ಲಿ 337 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 10 ಜನ ಸಾವನ್ನಪ್ಪಿದ್ದಾರೆ. ಒಂದು ವರ್ಷದೊಳಗಿನ 10 ಮಕ್ಕಳಲ್ಲಿ ಕೂಡ ಡೆಂಗ್ಯೂ ಧೃಡಪಟ್ಟಿದೆ. ಇದು ತೀವ್ರ ಆತಂಕಕ್ಕೆ ಕಾರಣವಾಗುತ್ತಿದೆ.
1 ವರ್ಷದೊಳಗಿನ 360 ಮಕ್ಕಳಲ್ಲಿ, 1 ರಿಂದ 18 ವರ್ಷದ 6,863 ಮಕ್ಕಳಲ್ಲಿ ಮತ್ತು 18 ವರ್ಷ ಮೇಲ್ಪಟ್ಟ 12,090 ಜನರಲ್ಲಿ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಕಳೆದ 24 ಗಂಟೆಯಲ್ಲಿ 123 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಇಲ್ಲಿಯವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ 8,800 ಪ್ರಕರಣಗಳು ಪತ್ತೆಯಾಗಿದ್ದು, ಮೂವರು ಡೆಂಗ್ಯೂಗೆ ಬಲಿಯಾಗಿದ್ದಾರೆ. ಹೀಗಾಗಿ ಜನರು ಇನ್ನೂ ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ಸೂಚನೆ ನೀಡುತ್ತಿದ್ದಾರೆ.








